ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ: ಶಾಸಕ ಎಂ. ಚಂದ್ರಪ್ಪ
ಹೊಳಲ್ಕೆರೆ,ಅ17: ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿದ್ದೀರಿ. ನಿಮ್ಮಗಳ ಋಣ ತೀರಿಸಬೇಕೆಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ಭರಮಸಾಗರ ಹೋಬಳಿ ಇಸಾಮುದ್ರ ಗ್ರಾಮದಲ್ಲಿ 6.55 ಕೋಟಿ ರೂ.ವೆಚ್ಚದಲ್ಲಿ ಇಸಾಮುದ್ರ ಗ್ರಾಮದಿಂದ ಭರಮಸಾಗರದವರೆಗೂ ನೂತನ ಡಾಂಬರ್ ರಸ್ತೆ ನಿರ್ಮಾಣ ನೂತನ ಸಮುದಾಯ ಭವನ, ದೇವಸ್ಥಾನ ಮುಂಭಾಗ ಸಿ.ಸಿ.ರಸ್ತೆ ಕಾಮಗಾರಿಗೆ ಶುಕ್ರವಾರ ಭೂಮಿ ಪೂಜೆ ಸಲ್ಲಿಸಿ ಮಾತಾಡಿ,
ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಹಣ ಕೊಡಲಿಲ್ಲ ಎಂದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆಂದಾಗ ತಕ್ಷಣ 650 ಕೋಟಿ ಮಂಜೂರು ಮಾಡಿದರು. ಹಾಗಾಗಿ ಭರಮಸಾಗರ ಕೆರೆ ದೊಡ್ಡ ಸಮುದ್ರದಂತೆ ಕಾಣುವಂತೆ ಅಭಿವೃದ್ದಿಪಡಿಸಿದ್ದೇನೆ. ತಾಲ್ಲೂಕಿನಾದ್ಯಂತ ಎಲ್ಲಾ ಕೆರೆಗಳ ಹೂಳು ತೆಗೆಸಿ ಜಾಲಿ ಗಿಡಗಳನ್ನು ನಿರ್ಮೂಲನೆ ಮಾಡಿ ಏರಿ ರಿಪೇರಿ ಮಾಡಿಸಿದ್ದೇನೆ. ಯಾರು ಉಪಕಾರ ಮಾಡಿದ್ದಾರೆ. ಒಳ್ಳೆಯವರ್ಯಾರು, ಕೆಟ್ಟವರ್ಯಾರು ಎನ್ನುವುದನ್ನು ಆಲೋಚಿಸಿ ಚುನಾವಣೆಯಲ್ಲಿ ಮತ ನೀಡಿ. ಎಲ್ಲಿಂದಲೋ ಬಂದು ತಲೆ ಕೆಡಿಸುವವರ ನಯವಾದ ಮಾತಿಗೆ ಮರುಳಾಗಬೇಡಿ ಎಂದು ಜನತೆಯನ್ನು ಎಚ್ಚರಿಸಿದರು.
ಭರಮಸಾಗರದಲ್ಲಿ ಮೊದಲನೆ ಬಾರಿಗೆ ಸ್ಪರ್ಧಿಸಿದಾಗ ರಸ್ತೆಗಳಿರಲಿಲ್ಲ. ಗೆದ್ದ ನಂತರ ಐದು ವರ್ಷಗಳಲ್ಲಿ ಎಲ್ಲಾ ಹಳ್ಳಿಗಳಲ್ಲಿ ರಸ್ತೆಗಳನ್ನು ಮಾಡಿಸಿದ್ದರಿಂದ ರಸ್ತೆ ರಾಜ ಎನ್ನುವ ಬಿರುದು ನೀಡಿ ಎರಡನೆ ಬಾರಿಗೂ ಜನ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರು. ಹೊಳಲ್ಕೆರೆ ತಾಲ್ಲೂಕಿನಾದ್ಯಂತ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿದ್ದೇನೆ. ರೈತರಿಗೆ ವಿದ್ಯುತ್, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ ಬಸ್ನಿಲ್ದಾಣಗಳನ್ನು ನಿರ್ಮಿಸಿದ್ದೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರುಗಳೆ ಅನುದಾನವಿಲ್ಲವೆಂದು ಗೋಳಾಡುತ್ತಿದ್ದಾರೆ. ನಾನು ಪ್ರತಿನಿತ್ಯವೂ ಕ್ಷೇತ್ರದಲ್ಲಿ ಒಂದಲ್ಲ ಒಂದು ಅಭಿವೃದ್ದಿ ಕೆಲಸಗಳನ್ನು ಮಾಡಿಸುತ್ತಿದ್ದೇನೆಂದರು.
ಯಾರಿಗೆ ಯೋಗ್ಯತೆ, ಕೆಪಾಸಿಟಿ ಇರುತ್ತದೋ ಅವರಿಗೆ ಸರ್ಕಾರದಿಂದ ಹಣ ಹೇಗೆ ತರಬೇಕೆನ್ನುವುದು ಗೊತ್ತಿರುತ್ತದೆ. ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥಮಾಡಿಕೊಂಡಿರುವ ನನಗೆ ಹಣದ ಬರವಿಲ್ಲ. ಅಜ್ಜಪ್ಪನಹಳ್ಳಿ ಬಳಿ 250 ಕೋಟಿ ರೂ.ವೆಚ್ಚದಲ್ಲಿ 220 ಮೆ.ವ್ಯಾ. ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಇನ್ನು ಆರು ತಿಂಗಳೊಳಗೆ ಪೂರ್ಣಗೊಂಡು ದಿನಕ್ಕೆ ಹತ್ತು ಗಂಟೆಗಳ ಕಾಲ ರೈತರಿಗೆ ವಿದ್ಯುತ್ ನೀಡುತ್ತೇನೆ. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇನೆಂದರು.
ಭರಮಸಾಗರ ಬಿಜೆಪಿ. ಮಂಡಲ ಮಾಜಿ ಅಧ್ಯಕ್ಷ ಎನ್.ಟಿ.ಬಸವರಾಜ್, ಶೈಲೇಶ್, ಮಂಜುನಾಥ್, ಕಲ್ಲೇಶ್, ಗ್ರಾಮದ ಮುಖಂಡರುಗಳಾದ ಸಿದ್ದಬಸಪ್ಪ, ಸಿದ್ದಲಿಂಗಣ್ಣ,
ಕಲ್ಲೇಶಪ್ಪ, ರುದ್ರಮುನಿ, ಹಿರೇಬೆನ್ನೂರು ನಾಗರಾಜ್, ಚಂದ್ರಶೇಖರ್, ರಾಜಣ್ಣ, ತಿಪ್ಪೇಶ್, ಕೋಟೇಶ್, ಅಂಜಿ, ಅರುಣ್ಕುಮಾರ್, ಗುತ್ತಿಗೆದಾರ ಬಲರಾಮ್ರೆಡ್ಡಿ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಫೋಟೋ ವಿವರಣೆ : ಭರಮಸಾಗರ ಹೋಬಳಿ ಇಸಾಮುದ್ರ ಗ್ರಾಮದಲ್ಲಿ ನೂತನ ಡಾಂಬರ್ ರಸ್ತೆ, ಸಮುದಾಯ ಭವನ, ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ
ಡಾ.ಎಂ.ಚಂದ್ರಪ್ಪನವರಿಂದ ಭೂಮಿ ಪೂಜೆ. ಫೋಟೋ-01.





