
ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಹಾಗೂ ಪುರಪ್ರವೇಶ ಕಾರ್ಯಕ್ರಮವನ್ನು ಸಾಂಸ್ಕೃತಿಕ ಹಬ್ಬದಂತೆ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸುಮಾರು 24 ಕಲಾತಂಡಗಳು, ಕವಿಗಳು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ. ರೈತರು, ಮಹಿಳೆಯರು ಮತ್ತು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, ಇದೊಂದು ವಿಶಿಷ್ಟ ಪುರಪ್ರವೇಶ ಕಾರ್ಯಕ್ರಮವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಶಾಸಕ ಎಸ್.ಆರ್. ವಿಶ್ವನಾಥ್ ಮಾತನಾಡಿ, ಬಿಎಸ್‌ವೈ ಅಭಿಮಾನೋತ್ಸವಕ್ಕೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದ್ದು, ಅವರಿಗೆ ಊಟದ ವ್ಯವಸ್ಥೆ ಮಾಡಲು ಬೆಂಗಳೂರಿನ ಶಾಸಕರು ವಿಶೇಷ ಸಭೆ ನಡೆಸಿದ್ದಾರೆ. ವಾರದ ಹಿಂದೆ ಕಾರ್ಯಕ್ರಮದ ಸ್ಥಳ ಪರಿಶೀಲನೆ ಕೂಡ ನಡೆಸಲಾಗಿದೆ ಎಂದು ಹೇಳಿದರು.
ಮೈಸೂರು, ಬೆಂಗಳೂರು, ಚಿತ್ರದುರ್ಗ, ತುಮಕೂರು ಸೇರಿದಂತೆ ಐದು ಕಡೆಗಳ ಪ್ರಮುಖ ಅಡುಗೆಯವರಿಗೆ ಊಟದ ಜವಾಬ್ದಾರಿ ನೀಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಊಟ ವಿತರಣೆ ಆರಂಭವಾಗಲಿದ್ದು, ಟೊಮೆಟೊ ಬಾತ್, ಮೊಸರನ್ನ, ಮೈಸೂರು ಪಾಕ್ ಹಾಗೂ ಅರ್ಧ ಲೀಟರ್ ಕುಡಿಯುವ ನೀರನ್ನು ನೀಡಲಾಗುವುದು. ಸಂಜೆ 6 ಗಂಟೆಯವರೆಗೆ ಊಟ ವಿತರಣೆ ಮುಂದುವರೆಯಲಿದೆ ಎಂದು ತಿಳಿಸಿದರು.
ಪ್ರತಿ ಅಡುಗೆ ಮನೆಯ ಬಳಿಯೂ ಬೆಂಗಳೂರಿನ ಶಾಸಕರ ತಂಡದಿಂದ ತಲಾ 100 ಸ್ವಯಂಸೇವಕರು ಕರ್ತವ್ಯ ನಿರ್ವಹಿಸಲಿದ್ದಾರೆ. ಬಿಸಿಯೂಟವನ್ನು ಹಂತ ಹಂತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದ್ದು, ಸರತಿ ಸಾಲಿನಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ನಂತರ ಸ್ವಚ್ಛತಾ ಕಾರ್ಯಕ್ಕೂ ಪೂರ್ವಸಿದ್ಧತೆ ಮಾಡಲಾಗಿದೆ ಎಂದು ಅವರು ಹೇಳಿದರು.

