
ಚಿತ್ರದುರ್ಗ: ಮೇ 9ರಂದು ಬೆಳಿಗ್ಗೆ ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ ನಡೆಯಲಿದೆ. ಆದ್ದರಿಂದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ವೈ ಅಭಿಮಾನೋತ್ಸವವು ಬೆಳಿಗ್ಗೆ ಬದಲಿಗೆ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. 3.45ರವೇಳೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಅಪ್ರತಿಮ ಹೋರಾಟಗಾರ, ರೈತ ನಾಯಕ, ಬಡವರ ಕಣ್ಮಣಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜಕೀಯ ಜೀವನದ 50 ವರ್ಷಗಳ ಪಯಣ ಪೂರೈಸಿದ,ಶುಭ ಘಳಿಗೆಯಲ್ಲಿ ಬಿ.ಎಸ್.ವೈ ಅಭಿಮಾನೋತ್ಸವ ನಡೆಸಲಾಗುತ್ತಿದೆ. ವ್ಯಾಪಕ ಸಿದ್ಧತೆ ನಡೆದಿದೆ. 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಬರಲಿದ್ದಾರೆ.


ಪ್ರತಿ ಜಿಲ್ಲೆಗೆ ಹೋಗಿ ಸ್ವಾಮೀಜಿಗಳಿಗೆ ಆಮಂತ್ರಣ ಪತ್ರ ನೀಡಲು ಯೋಜಿಸಿದ್ದೆವು. ಸಮಯದ ಅಭಾವದಿಂದ ಎಲ್ಲರ ಭೇಟಿ ಸಾಧ್ಯವಾಗಿಲ್ಲ. ನಾಡಿನ ಎಲ್ಲ ಹರಗುರು ಚರಮೂರ್ತಿಗಳು, ಮಠಾಧೀಶರು, ಸ್ವಾಮೀಜಿಗಳು 9ರಂದು ಐತಿಹಾಸಿಕ ಅಭಿಮಾನೋತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು. ಎಲ್ಲ ಸಮಾಜದ ಗುರುಗಳು ಬಂದು ಆಶೀರ್ವದಿಸಬೇಕೆಂದು ಮನವಿ ಮಾಡಿದರು. ಅಭಿಮಾನಿಗಳು ಆಗಮಿಸಲು 10 ಸಾವಿರ ಬಸ್ಗಳನ್ನು ಬುಕ್ ಮಾಡಲಾಗಿದೆ. ನಿರೀಕ್ಷೆಗೂ ಮೀರಿ ಸ್ಪಂದನೆ ಲಭಿಸುತ್ತಿದೆ. ಸ್ವಾಮೀಜಿಗಳು, ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 2 ಗ್ರಂಥಗಳ ಬಿಡುಗಡೆ: ಗೋವಿಂದ ಕಾರಜೋಳ ಮಾಜಿ ಡಿಸಿಎಂ ಮತ್ತು ಸಂಸದ ಗೋವಿಂದ ಕಾರಜೋಳ ಮಾತಾಡಿ, ಬಿ.ಎಸ್.ಯಡಿಯೂರಪ್ಪ 50 ವರ್ಷಗಳ ಸಮಾಜಸೇವೆ, ಜೀವನಚರಿತ್ರೆಯನ್ನು ನಾವು ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಒಂದು ಸಾಂಸ್ಕೃತಿಕ ಹಬ್ಬದ ರೀತಿ ಆಚರಿಸಲು ನಿರ್ಧರಿಸಿದ್ದೇವೆ. ಅವರ ಜೀವನಚರಿತ್ರೆ ಮತ್ತು ಸದನದಲ್ಲಿ ಯಡಿಯೂರಪ್ಪನವರು ಎಂಬ ಸಂಬಂಧ ‘ಕೆಂದಾವರೆ- ಕಮಲದಲ್ಲಿ ಅರಳಿದ ಹೂ’ ‘ಸದನದಲ್ಲಿ ಶಿಕಾರಿ’ ಎಂಬ 2 ಗ್ರಂಥಗಳನ್ನು ಅವತ್ತು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ಮೇ. 8ರಂದು ಸಂಜೆ ಯಡಿಯೂರಪ್ಪನವರ ಪುರಪ್ರವೇಶ ನಡೆಯಲಿದೆ. ಇದನ್ನು ನಾಡಿನ ಸಾಂಸ್ಕೃತಿಕ ಹಬ್ಬದ ರೀತಿಯಲ್ಲಿ ಮಾಡಲು ತಯಾರಿ ಮಾಡಿದ್ದೇವೆ. 24 ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು

