ಹೊಳಲ್ಕೆರೆ : ನೀರು ವಿದ್ಯುತ್ ರೈತರಿಗೆ ಎರಡು ಕಣ್ಣುಗಳಿದ್ದಂತೆ ಎಂದು ಭಾವಿಸಿ ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 500 ಕೋಟಿಯಲ್ಲಿ 220 ಕೆ.ವಿ. ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣ ಮಾಡುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ತಾಲ್ಲೂಕಿನ ಹಿರೆಕಂದವಾಡಿಯಲ್ಲಿ 85 ಲಕ್ಷದಲ್ಲಿ ನೂತನ ಆರೋಗ್ಯ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ಸಲ್ಲಿಸಿ ಮಾತಾಡಿ,
ಜೋಗ್‍ಫಾಲ್ಸ್ ನಿಂದ ನೇರವಾಗಿ ಇಲ್ಲಿಗೆ ವಿದ್ಯುತ್ ಸರಬರಾಜಾಗಲಿದೆ.ಅರಿಶಿನಘಟ್ಟ, ಚಿತ್ರಹಳ್ಳಿ, ತೇಕಲವಟ್ಟಿ, ಎನ್.ಜಿ.ಹಳ್ಳಿ, ತಾಳ್ಯ, ಮಲ್ಲಾಡಿಹಳ್ಳಿ ವಿದ್ಯುತ್ ಕೇಂದ್ರಗಳ ಮೂಲಕ ಎಲ್ಲಾ ಕಡೆ ಕರೆಂಟ್ ಪೂರೈಕೆಯಾಗಲಿದೆ. ದಿನಕ್ಕೆ 8ರಿಂದ 10 ಗಂಟೆ ರೈತರಿಗೆ ವಿದ್ಯುತ್ ನೀಡುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ಕೊಟ್ಟರು.
ಎಲ್ಲಿ ಹೋದರು ಗೌರವ ಮರ್ಯಾದೆಯಿಟ್ಟುಕೊಂಡಿದ್ದೇನೆ. ರಾಜ್ಯದಲ್ಲಿ ಸರ್ಕಾರ ಯಾವುದಿದೆ ಎನ್ನುವುದು ಮುಖ್ಯವಲ್ಲ. ನಾನು ಕೇಳಿದಷ್ಟು ಅನುದಾನ ಕೊಡುತ್ತದೆ. ಬೋರ್‍ವೆಲ್ ಕೆರೆ ಕಟ್ಟೆಗಳಲ್ಲಿ ನೀರು ತುಂಬಿ ತುಳುಕಾಡುತ್ತಿದೆ. ಒಂದು ವರ್ಷದೊಳಗೆ ವಿದ್ಯುತ್ ಪವರ್‍ಸ್ಟೇಷನ್ ಕಾಮಗಾರಿ ಪೂರ್ಣಗೊಳ್ಳುತ್ತದೆ. ತಾಲ್ಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದ ಮಧ್ಯೆ 40 ಅಡಿ ಆಳದಲ್ಲಿ ಪಿಲ್ಲರ್ ಕಟ್ಟಿ ಪಂಪ್ ಕೂರಿಸಿ ಅರವತ್ತು ಕೋಟಿ ರೂ.ವೆಚ್ಚದಲ್ಲಿ ಫಿಲ್ಟರ್ ಅಳವಡಿಸಲಾಗಿದೆ. ಕ್ಷೇತ್ರಾದ್ಯಂತ 493 ಹಳ್ಳಿಗಳಲ್ಲಿ ಸಿ.ಸಿ.ರಸ್ತೆ ಮಾಡಿಸಿದ್ದೇನೆ. ಸುತ್ತಮುತ್ತಲಿನ ಗ್ರಾಮಸ್ಥರಿಗೆ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಚಿಕಿತ್ಸೆ ಸಿಗಲಿ ಎನ್ನುವ ಉದ್ದೇಶದಿಂದ 85 ಲಕ್ಷದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸುತ್ತಿದ್ದೇನೆ. ರಸ್ತೆ ಅಗಲೀಕರಣ ಮಾಡಬೇಕಾಗಿರುವುದರಿಂದ ರಸ್ತೆ ಬದಿಯಲ್ಲಿ ಮನೆಗಳಿರುವವರು ಸ್ವಇಚ್ಚೆಯಿಂದ ಮನೆಗಳನ್ನು ಬಿಟ್ಟುಕೊಟ್ಟರೆ ಬೇರೆ ಕಡೆ 7ಲಕ್ಷ ರೂ.ವೆಚ್ಚದಲ್ಲಿ ಒಂದೊಂದು ಆರ್.ಸಿ.ಸಿ. ಮನೆಗಳನ್ನು ಕಟ್ಟಿಸಿ. ವಿದ್ಯುತ್, ನೀರು, ಶೌಚಾಲಯದ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ ಮಹದೇವಪ್ಪ, ಉಪಾಧ್ಯಕ್ಷ ಲೋಕೇಶಪ್ಪ, ಮಾಜಿ ಅಧ್ಯಕ್ಷ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ದೇವರಾಜ್, ಕರಿಯಪ್ಪ
ನಂಜಪ್ಪ, ಹೊಳಲ್ಕೆರೆ ತಾಲ್ಲೂಕು ಆರೋಗ್ಯಾಧಿಕಾರಿ ರೇಖಾ, ಡಾ.ಸುಹೀಲ್ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು





