ಚಿತ್ರದುರ್ಗ: ನಗರಸಭೆ ಸದಸ್ಯರಾದ ಶ್ರೀನಿವಾಸ್ ಮತ್ತು ಭಾಸ್ಕರ್ ಇಬ್ಬರು ಕೋಟೆ ಜಾಗವನ್ನು ಕಬಳಿಸಿಕೊಂಡು, ತಮ್ಮ ಸಹೋದರನ ಹೆಸರಿಗೆ ಮಾಡಿಕೊಟ್ಟಿದ್ದಾರೆಂದು ಚಿತ್ರದುರ್ಗ ನಗರಸಭೆ ಸದಸ್ಯ ಸಂದೀಪ್ (ದೀಪು) ಆರೋಪಿಸಿದ್ದಾರೆ. ಅವರು ಚಿತ್ರದುರ್ಗದ ಮುಕ್ತಿಧಾಮದ ಬಳಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಮುಕ್ತಿಧಾಮದ ಬಳಿಯಿರುವ ನಾಲ್ಕುವರೆ ಎಕರೆ ಜಾಗವನ್ನು ಕಬಳಿಸಿದ್ದಾರೆ. ಆದರೆ ನಾನು ನಗರಸಭೆ ಜಾಗವನ್ನು ಕಬಳಿಸುತ್ತಿದ್ದೇನೆಂದು ನನ್ನ ವಿರುದ್ಧ ಆರೋಪಿಸುತ್ತಿದ್ದು, ಆರೋಪ ಮಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಕೋಟೆ ಮುಂಭಾಗದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದ್ದು, ಅವುಗಳಿಗೆ ಕಂದಾಯವನ್ನು ಕಟ್ಟುತ್ತಿಲ್ಲ. ಹೊಸದಾಗಿ ನಿರ್ಮಿಸುತ್ತಿರುವ ಕಟ್ಟಡಕ್ಕು ನಗರಸಭೆಯಿಂದ ಪರವಾನಗಿ ಪಡೆದಿಲ್ಲ. ಕೋಟೆ ಜಾಗ ಒತ್ತುವರಿ ಮಾಡಿಕೊಂಡಿರುವ ಇವರ ವಿರುದ್ಧ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಗೆ ದೂರು ಕೊಡುವುದರ ಜೊತೆಗೆ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದರು. ಇನ್ನು ನನ್ನ ಮೇಲೆ ಆರೋಪ ಮಾಡುತ್ತಿರುವ ಇವರು ಉಚ್ಛಂಗಿಯಲ್ಲಮ್ಮ ದೇವರ ಮುಂದೆ ಬಂದು ನಾವೆಲ್ಲೂ ನಗರಸಭೆ ಜಾಗವನ್ನು ಕಬಳಿಸಿಲ್ಲ ಎಂದು ಪ್ರಮಾಣ ಮಾಡಲಿ, ನಾನು ಮಾಡುತ್ತೇನೆಂದು ಸವಾಲು ಎಸೆದರು. ಇನ್ನು ಮಾಜಿ ಅಧ್ಯಕ್ಷರು ನಗರಸಭೆ ಆಸ್ತಿ ಕಬಳಿಸಿದ್ದಾರೆಂದು ಆರೋಪಿಸುತ್ತಿರುವ ಇವರು ಮಾಜಿ ಅಧ್ಯಕ್ಷ ಯಾರೆಂದು ಹೇಳಲಿ, ಅವರೇ ಬಂದು ಉತ್ತರ ಕೊಡುತ್ತಾರೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಬಾರದು ಎಂದು ಕಿಡಿ ಕಾರಿದರು. ಕೋಟೆ ಆಸ್ತಿಯನ್ನು ಉಳಿಸಲು ನಮ್ಮ ಹೋರಾಟ ಆರಂಭವಾಗಲಿದೆ ಎಂದು ಹೇಳಿದರು. ಈ ಸಮಯದಲ್ಲಿ ನಗರಸಭೆ ಮಾಜಿ ಸದಸ್ಯ ವಿಜಯಕುಮಾರ್ ಇದ್ದರು.





