ಚಿತ್ರದುರ್ಗ: ಜಿಲ್ಲೆಯಲ್ಲಿ ಸಾಧನೆ ಮಾಡಿದಂತಹ ಸಾಕಷ್ಟು ಕ್ರೀಡಾಪಟುಗಳು ಇದ್ದು, ಅವರುಗಳನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟಕ್ಕೆ ಬೆಳೆಸುವ ನಿಟ್ಟಿನಲ್ಲಿ ತಾಂತ್ರಿಕ ಚಿಂತನೆ ನಡೆಸುವ ಅಗತ್ಯತೆ ಇದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರಚೆನ್ನಯ್ಯ ಸ್ವಾಮೀಜಿ ಎಂದು ಹೇಳಿದರು.
ನಗರದ ಓನಕೆ ಒಬವ್ವ ಕ್ರೀಡಾಂಗಣದಲ್ಲಿ ಇಂದು ರಾಯಲ್ಸ್ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಹೊರತಂದ 2021 ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ರಾಜ್ಯದಲ್ಲೇ ಆರ್ಥಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಪಡೆದಿರುವ ಚಿತ್ರದುರ್ಗ ಶೌರ್ಯ, ಇತಿಹಾಸ, ಧಾರ್ಮಿಕತೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಕಷ್ಟು ಜನ ಹೆಸರು ಮಾಡಿದ್ದಾರೆ.
ಉತ್ತಮ ಪ್ರತಿಭೆಯನ್ನು ಹೊಂದಿರುವ ಸಾಕಷ್ಟು ಜನ ಕ್ರೀಡಾಪಟುಗಳು ಜಿಲ್ಲೆಯಲ್ಲಿ ಇದ್ದು, ಸೂಕ್ತ ಪ್ರೋತ್ಸಾಹ ಇಲ್ಲದ ಕಾರಣ ಸೊರಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜಗತ್ತೇ ತಿರುಗಿ ನೋಡುವಂತೆ ಮಾಡುವ ಶಕ್ತಿ ಕ್ರೀಡೆಗೆ ಇದ್ದು, ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿ ಒಂದು ಕ್ರೀಡಾಕೂಟ ಮಾಡಬೇಕು ಎಂಬುದು ನಮ್ಮ ಉದ್ದೇಶ. ಕಾರಣಾಂತರಗಳಿಂದ ಆಗುತ್ತಿಲ್ಲ ಎಂದ ಅವರು, ಎಲ್ಲಾ ಕ್ರೀಡೆಗಳನ್ನು ಒಟ್ಟುಗೂಡಿಸಿಕೊಂಡು ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಮಾಡುವ ಮೂಲಕ ರಾಜ್ಯ ಸೇರಿದಂತೆ ರಾಷ್ಟ್ರವೇ ಚಿತ್ರದುರ್ಗದ ಕಡೆ ತಿರುಗಿ ನೋಡುವಂತೆ ಮಾಡಲು ನಾವುಗಳು ಮುಂದಾಗಬೇಕಿದೆ. ಇದಕ್ಕೆ ಎಲ್ಲಾರ ಸಹಕಾರ ಮುಖ್ಯ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ಜಿಲ್ಲೆಯಲ್ಲಿ ಕ್ರೀಡಾಕೂಟದ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಕೇವಲ ರಾಯಲ್ ಸ್ಪೋರ್ಟ್ಸ್ ಕ್ಲಬ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಲಾಕ್ ಡೌನ್ ವೇಳೆ ಹೊರ ರಾಜ್ಯಗಳಿಂದ ಬಂದಂತಹ ಜನರಿಗೆ ಹಾಗೂ ಸ್ಥಳೀಯವಾಗಿರುವಂತಹ ಸಾಕಷ್ಟು ಜನ ಬಡವರಿಗೆ ಕೂಲಿ ಕಾರ್ಮಿಕರಿಗೆ ಆಹಾರದ ಕಿಟ್ ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಂತಹ ಕಾರ್ಯಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮಾಡುವಂತೆ ಆಶಿಸಿದರು.
ಯುವಜನ ಕ್ರೀಡಾ ಇಲಾಖೆಯ ಮಹೀಬುಲ್ಲಾ ಮಾತನಾಡಿ, ರಾಯಲ್ಸ್ ಸ್ಪೋರ್ಟ್ ಕ್ಲಬ್ ಕ್ರೀಡಾ ಚಟುವಟಿಕೆಗಳ ಜೊತೆಗೆ ಮಾನವೀಯತೆ ಮೆರೆಯುವ ಕೆಲಸಗಳನ್ನು ಮಾಡಿರುವುದು ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಯಲ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಲೋಕೆಶ್, ಸಾಧಿಕ್, ಪ್ರಕಾಶ್, ತಿಮ್ಮಣ್ಣ, ವಸಂತ, ದ್ವಾರಕನಾಥ್, ಸೂಷ್ಮರಾಣಿ, ಸುಚೇತನ ಸೇರಿದಂತೆ ಇತರರು ಹಾಜರಿದ್ದರು.
ಸಂಯುಕ್ತವಾಣಿ