ಚಿತ್ರದುರ್ಗ,ಮಾ07: ನಗರ ಸಭಾ ವ್ಯಾಪ್ತಿಯ ಗೂಡಂಗಡಿ ಹಾಗೂ ಬೀದಿ ಬದಿಯ ವ್ಯಾಪಾರಸ್ಥರಿಗೆ ಹಾಗೂ ರೈತಾಪಿ ವರ್ಗದವರು ಇನ್ನು ಮುಂದೆ ಜಕಾತಿ ನೀಡುವಂತಿಲ್ಲ ಎಂದು ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ನಾನು ಚುನಾವಣಾ ಸ್ಪರ್ಧೆಯ ಸಮಯದಲ್ಲಿ ಕೊಟ್ಟ ಮಾತಿನಂತೆ ನಗರಸಭಾ ವ್ಯಾಪ್ತಿಯಲ್ಲಿ, ವ್ಯಾಪಾರಸ್ಥರು ಯಾವುದೇ ರೀತಿಯ ಜಕಾತಿ ಪಾವತಿಸದಂತೆ ಮಾಡುತ್ತೇನೆ ಎಂದಿದ್ದು, ಅದರಂತೆ ಹೇಳಿಕೆ ನೀಡಿದ್ದೆ ಆ ಪ್ರಕಾರ ಚಿತ್ರದುರ್ಗವು ಬರಗಾಲಪೀಡಿತ ಪ್ರದೇಶವಾಗಿದ್ದು ಬೀದಿ ಬದಿಯ ಸಣ್ಣಪುಟ್ಟ ವ್ಯಾಪಾರಸ್ಥರು ಚಿತ್ರದುರ್ಗ ನಗರದಲ್ಲಿ ವ್ಯಾಪಾರ ಮಾಡುವಾಗ ನೀಡಬೇಕಾಗಿದ್ದ ಜಕಾತಿಯನ್ನು ಇನ್ನು ಮುಂದೆ ಮುಂದಿನ ಪ್ರಕಟಣೆಯವರೆಗೆ ಪಾವತಿಸಬಾರದೆಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.





