ಚಿತ್ರದುರ್ಗ ಮೇ.30: ಜಿಲ್ಲಾ ಪೌರಕಾರ್ಮಿಕರ ಸಂಘದ ದಿಂದ ನಗರಸಭೆಯ ಮುಂದೆ ಕಳೆದ ೨೭ ರಿಂದ ನಡೆಸುತ್ತಿರುವ, ಅನಿರ್ಧಿಷ್ಟ ಮುಷ್ಕರ ಸ್ಥಳಕ್ಕೆ ಇಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭೇಟಿ ನೀಡಿದರು. ಬೇಡಿಕೆಗಳನ್ನು ಆಲಿಸಿದ ಮಾಜಿ ಶಾಸಕರು ಮಾತಾಡಿ,ನಾವು ವಿರೋಧಪಕ್ಷದಲ್ಲಿದ್ದೇವೆ. ವಿಧಾನಸಭೆಯಲ್ಲಿ ಮಾತಾಡಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳನ್ನು ಒತ್ತಾಯಿಸುವಂತೆ ಹೇಳುತ್ತೇನೆಂದು ಭರವಸೆ ನೀಡಿದರು. ರಾಜ್ಯದಲ್ಲಿರುವ ಎಲ್ಲಾ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆದರೂ ಕೂಡ ಸರ್ಕಾರ ನಿಮ್ಮಗಳತ್ತ ಗಮನಹರಿಸದೆ ನಿರ್ಲಕ್ಷ್ಯ ತೋರುತ್ತಿದೆ. ಕೋವಿಡ್ ಸಮಯದಲ್ಲಿ ಪೌರ ಕಾರ್ಮಿಕರು ಯಾರು ಮಾಡದ ಕೆಲಸವನ್ನು ಮಾಡಿದ್ದಾರೆ. ಮಾರಕ ರೋಗದ ಜೊತೆ ಕೆಲಸವನ್ನು ಮಾಡಿದ್ದಾರೆ. ಈ ಕೆಲಸವನ್ನು ಬೇರೆ ಯಾರು ಮಾಡಲ್ಲ, ಇವರಿಗೆ ಇವರೇ ಸಾಟಿ. ಇಂತಹರಿಗೆ ಸರ್ಕಾರ ಉತ್ತಮ ಸೌಕರ್ಯ ನೀಡಬೇಕಿದೆ. ಸರ್ಕಾರ ಬೇರೆ ನೌಕರರಿಗಿಂತ ಇವರಿಗೆ ಹೆಚ್ಚಿನ ಅದ್ಯತೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಸುಮಾರು ೨೫-೩೦ ವರ್ಷಗಳಿಂದ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸಿಬ್ಬಂದಿಗಳು, ಲೋಡರ್ಸ್, ಗುತ್ತಿಗೆ ಲೆಕ್ಕಿಗರು, ಕ್ಲೀನರ್ ಪೌರಕಾರ್ಮಿಕರು, ಸೂಪರ್ ವೈಸರ್ಸ್, ಕಂಪ್ಯೂಟರ್ ಆಪರೇಟರ್‌ಗಳು, ಜ್ಯೂನಿಯರ್ ಪ್ರೋಗ್ರಾಸ್ ಸಿಬ್ಬಂದಿಗಳನ್ನು ಖಾಯಂ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದು, ಕೆ.ಜಿ.ಐ.ಡಿ., ಜಿ.ಪಿ.ಎಫ್., ಜ್ಯೋತಿ ಸಂಜೀವಿನಿ, ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡಬೇಕು. ೨೦೨೨-೨೩ನೇ ಸಾಲಿನಲ್ಲಿ ಪೌರಕಾರ್ಮಿಕರ ವಿಶೇಷ ನೇಮಕಾತಿಯಡಿ ಪೌರಕಾರ್ಮಿಕರು ನೇಮಕಾತಿ ಹೊಂದಿದ್ದು, ನೌಕರರಿಗೆ ಸರ್ಕಾರವು ನಗರ ಸ್ಥಳೀಯ ಸಂಸ್ಥೆ ನಿಧಿಯಿಂದ ವೇತನ ಪಡೆಯಲು ಆದೇಶಿಸಲಾಗಿದ್ದನ್ನು ರದ್ದುಪಡಿಸಿ, ಎಸ್.ಎಫ್.ಸಿ ಅನುದಾನದಡಿ ವೇತನ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಈಗ ನಾನು ಆಧಿಕಾರದಲ್ಲಿ ಇಲ್ಲ ಅಲ್ಲದೆ ನಮ್ಮ ಪಕ್ಷವೂ ಸಹಾ ಅಧಿಕಾರವನ್ನು ನಡೆಸುತ್ತಿಲ್ಲ. ನಿಮ್ಮ ಪರವಾಗಿ ನಾನು ಯಾವಾಗಲೂ ಇದ್ದೇನೆ ನನ್ನ ಅಧಿಕಾರದ ಅವಧಿಯಲ್ಲಿ ಹಲವಾರು ಪೌರ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿದ್ದೇ, ಅವರಿಗೆ ಮನೆಗಳನ್ನು ಸಹಾ ನೀಡಿದ್ದೇ ಎಂದು ಸ್ಮರಿಸಿಕೊಂಡರು. ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀನಿವಾಸ್, ಹರೀಶ್, ದೀಪು, ಮಾಜಿ ಸದಸ್ಯರಾದ ಕೃಷ್ಣಮೂರ್ತಿ, ರವಿಶಂಕರ್, ಪೌರಕಾರ್ಮಿಕರ ಸಂಘದ ಸಿ.ರೇಣುಕಾ, ಎಸ್.ಪಿ.ಲವ, ಪುಟ್ಟಸ್ವಾಮಿ, ಸೇರಿದಂತೆ ಪೌರಕಾರ್ಮಿಕರು ಭಾಗವಹಿಸಿದ್ದರು.





