ಜಿಲ್ಲೆಯಲ್ಲಿ ತಾಯಿ ಮರಣ ಜರುಗದಂತೆ ಕ್ರಮವಹಿಸಿ, ಸುರಕ್ಷಿತ ತಾಯ್ತನ, ಪ್ರಸೂತಿ ಸೇವೆ ಒದಗಿಸಿ
ಜಿಲ್ಲೆಯಲ್ಲಿ ಸೌಲಭ್ಯವಂಚಿತವಾಗಿ ಯಾವುದೇ ತಾಯಿ ಮರಣ ಜರುಗದಂತೆ ತಮ್ಮ ತಮ್ಮ ಹಂತದಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಿ ಎಲ್ಲಾ ವರ್ಗದವರಿಗೂ ಸುರಕ್ಷಿತ ತಾಯ್ತನ ಮತ್ತು ಪ್ರಸೂತಿ ಸೇವೆ ಒದಗಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ವ್ಶೆದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಯಿ ಮರಣ, ಶಿಶು ಮರಣ ಕಾರಣಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗೆ ಹೆರಿಗೆಗಾಗಿ ಬಂದಂತಹ ಸಂದರ್ಭದಲ್ಲಿ ಲಭ್ಯವಿರುವ ಸೌಲಭ್ಯಗಳ ಅಡಿಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆಯು ದೊರೆಯುವಂತಾಗಬೇಕು ಎಂದು ಹೇಳಿದರು.
ಪ್ರಸ್ತುತ ಜಿಲ್ಲೆಯಲ್ಲಿ ತಾಯಿ ಮರಣಗಳ ಸಂಖ್ಯೆ 4 ಇದ್ದು, ಪ್ರಮಾಣ ಶೇ.30.50% ಇರುತ್ತದೆ. ರಾಜ್ಯ ಮಟ್ಟದಲ್ಲಿ ತಾಯಿ ಮರಣವು ಒಂದು ಲಕ್ಷ ಜೀವಂತ ಜನನಗಳಿಗೆ 83 ಇರುತ್ತದೆ. 2030 ರ ವೇಳೆಗೆ 70 ಕ್ಕೆ ತರಲು ಪ್ರಯತ್ನ ನಡಸಲಾಗುತ್ತಿದೆ. ತಾಯಿ ಮರಣಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಆಯಾ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು ನಿಗದಿತ ದಿನಗಳಂದು ಅವರ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಗರ್ಭಿಣಿಯರನ್ನು ಆರೈಕೆ ಮಾಡಬೇಕು ಹಾಗೂ ಬಾಣಂತಿಯರಿಗೆ ಭೇಟಿ ನೀಡಿ ಯಾವುದೇ ಸಂದರ್ಭದಲ್ಲಿ ಅಪಾಯಕಾರಿ ಚಿಹ್ನೆಗಳು ಕಂಡುಬಂದರೆ ತಕ್ಷಣವೇ ಹೆಚ್ಚಿನ ಚಿಕಿತ್ಸೆ ಸಿಗುವಂತಹ ಆರೋಗ್ಯ ಸಂಸ್ಥೆಗೆ ಜವಬ್ದಾರಿಯಿಂದ ಕಳುಹಿಸಬೇಕು ಎಂದು ಹೇಳಿದರು.
ಜಿಲ್ಲಾ ಆರ್.ಸಿ.ಹೆಚ್ ಆಧಿಕಾರಿ ಡಾ. ರೇಣುಪ್ರಸಾದ್ ಮಾತನಾಡಿ, ಎಲ್ಲಾ ವೈದ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗರ್ಭಿಣಿಯರಿಗೆ ಮತ್ತು ಹೆರಿಗೆ ಆಗಬಹುದಾದಂತಹ ಫಲಾನುಭವಿಗಳಿಗೆ ಸುಮನ್ ಕಾರ್ಯಕ್ರಮ ಮತ್ತು ಜೆ.ಎಸ್.ಎಸ್.ಕೆ ಕಾರ್ಯಕ್ರಮದಡಿಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಬಳಸಿಕೊಳ್ಳುವ ಬಗ್ಗೆ ಹಾಗೂ ಆಯುಷ್ಮಾನ್ ಕಾರ್ಡ್‍ಅನ್ನು ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಮತ್ತು ಐ.ಇ.ಸಿ ಆರೋಗ್ಯ ಶಿಕ್ಷಣ ನೀಡುವುದರ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಲತಾ, ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಸ್ಮಧಾ, ಬೆಲಗೂರು ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ಕವಿತಾ, ಜಿಲ್ಲಾ ಆಸ್ಪತ್ರೆ ಆರ್.ಎಂ.ಓ ಡಾ.ಆನಂದ ಪ್ರಕಾಶ್, ಜಿಲ್ಲೆಯಲ್ಲಿ ಘಟಿಸಿರುವ ಹಾಗೂ ಹೊರ ಜಿಲ್ಲೆಂiÀಲ್ಲಿ ಘಟಿಸಿರುವ ಎಲ್ಲಾ ತಾಯಿ ಮರಣಕ್ಕೆ ಸಂಬಂಧಿಸಿದಂತಹ ವೈದ್ಯಾಧಿಕಾರಿಗಳು, ಹಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಮೆಂಟರ್, ಪ್ರಾಥಮಿಕ ಸುರಕ್ಷಾ ಅಧಿಕಾರಿಗಳು, ಆಶಾ ಸುಗಮಕಾರರು, ಆಶಾ ಕಾರ್ಯಕರ್ತೆಯರು ಮತ್ತು ತಾಯಿ ಮರಣಕ್ಕೆ ಸಂಬಂಧಿಸಿದ ಕುಟುಂಬಸ್ಥರು ಭಾಗವಹಿಸಿದ್ದರು.




