ಕಾಯಕದಲ್ಲಿ ಕೈಲಾಸ ಕಂಡ ಶರಣ ನುಲಿಯ ಚಂದಯ್ಯ
ಕಾಯಕದಲ್ಲಿ ಕೈಲಾಸ ಕಂಡ ಶರಣ ನುಲಿಯ ಚಂದಯ್ಯ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.
ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಜಯಂತಿ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನುಲಿಯ ಚಂದಯ್ಯ ಬಸವಣ್ಣನವರ ಸಮಾಕಾಲೀನರು ಮತ್ತು ಅವರ ಜೊತೆ ಕೈಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು. ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದರು ಎಂದು ಹೇಳಿದರು.
ಶರಣರು, ವಚನಕಾರರು, ಅನುಭಾವಿಗಳನ್ನು ಸ್ಮರಿಸುವ ಮೂಲಕ ಸಮಾಜಕ್ಕೆ ಗಟ್ಟಿನೆಲೆ ಹಾಕಿ ಕೊಡುವ ನಿಟ್ಟಿನಲ್ಲಿ ಮಹನೀಯರ ಜಯಂತಿಗಳನ್ನು ಆಚರಿಸಬೇಕಿದೆ. ನುಲಿಯ ಚಂದಯ್ಯ ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ತ್ರಿವಿಧ ದಾಸೋಹಿಗಳು ಹಾಗೂ ಶೂನ್ಯಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ನುಲಿಯ ಚಂದಯ್ಯ ಅವರ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಇದೇ ಮೊದಲ ಬಾರಿಗೆ ಆಚರಿಸಲಾಗುತ್ತಿದೆ. ಇದು ಚಂದಯ್ಯ ಅವರಿಗೆ ಸಲ್ಲುವ ದೊಡ್ಡ ಗೌರವವಾಗಿದೆ. 12ನೇ ಶತಮಾನದ ಬಸವಯುಗದಲ್ಲಿ ಮಿಂಚಿದ ಧೃವತಾರೆ ಚಂದಯ್ಯನವರು ಎಂದು ಬಣ್ಣಿಸಿದರು.
ಚಂದಯ್ಯ ಹಗ್ಗ ಹೊಸೆಯುವ ಅಪೂರ್ವ ಕಾಯಕ ಮಾಡುತ್ತಿದ್ದರು. ಕಾಯಕ ಬದುಕಿಗೆ ಒಂದು ಮಾರ್ಗ ಹಾಗೂ ಆಧಾರವೂ ಹೌದು. ಕಾಯಕದಲ್ಲಿ ಭಿನ್ನಬಾವ ಮಾಡಲು ಸಾಧ್ಯವಿಲ್ಲ. ಎಲ್ಲ ವೃತ್ತಿಯನ್ನು ಸಮಾನವಾಗಿ ಕಾಣಲಿದೆ. ಕಾಯಕ ತತ್ವ ಸರ್ವಶ್ರೇಷ್ಟವಾದ ಒಂದು ತತ್ವವಾಗಿದೆ. ನುಲಿಯ ಚಂದಯ್ಯ ಅವರು ಕಾಯಕ ತತ್ವಕ್ಕೆ ಭಾಷ್ಯ ಬರೆದ ಅದ್ಭುತ ಶರಣರು ಎಂದು ಹೇಳಿದರು.
ಪ್ರಾಮಾಣಿಕವಾಗಿ, ಪರಿಶುದ್ಧವಾಗಿ, ಸತ್ಯಶುದ್ಧರಾಗಿ ಕಾಯಕ ಮಾಡುತ್ತಾರೆಯೋ ಅವರ ಇಡೀ ಜೀವನ ಮುಕ್ತಿಯನ್ನು ಅನುಭವಿಸಲಿದೆ. ಕಾಯಕ ಮಾಡುವುದಿಲ್ಲವೋ ಅವರು ಮುಕ್ತರಾಗುವುದಿಲ್ಲ. ಕಾಯಕ ಮಾಡುವ ಉದಾತ್ತ ತತ್ವನ್ನು ಜಗತ್ತಿಗೆ ಸಾರಿ ಹೇಳಿದವರು ನುಲಿಯ ಚಂದಯ್ಯನವರು, ಕಾಯಕಜೀವಿಗಳೂ, ಕಾಯಕ ಪ್ರೇಮಿ, ಕಾಯಕಯೋಗಿಗಳು ಹೌದು. ಕಾಯಕತತ್ವವನ್ನು ಚಾಚೂತಪ್ಪದೇ ಜೀವನದಲ್ಲಿ ಪಾಲಿಸಿ, ಉದಾತ್ತತೆಯನ್ನು ತಂದುಕೊಟ್ಟವರು ಎಂದು ಹೇಳಿದರು.
ಆರ್.ನುಲೇನೂರು ಗ್ರಾಮದ ಶರಣ ಸಾಹಿತಿ ಜಿ.ಎನ್.ಬಸವರಾಜಪ್ಪ ಉಪನ್ಯಾಸ ನೀಡಿ, ಕಾಯಕಯೋಗಿ ನುಲಿಯ ಚಂದಯ್ಯ ಅವರ ಅನುಭಾವ ನಮ್ಮೆಲ್ಲರಿಗೆ ಅತ್ಯಾವಶ್ಯಕವಾಗಿ ಬೇಕಾಗಿದೆ. ಜೀವನ ನಿರ್ವಹಣೆ ಮಾಡುವುದು ಕಾಯಕವಲ್ಲ. ಕಾಯಕ ಅಂದರೆ ಅಮೂಲ್ಯವಾದ ಮೌಲ್ಯ. ಜಗತ್ತಿನ ಇತಿಹಾಸದಲ್ಲಿಯೇ ಯಾರು ಕೊಡದೇ ಇರುವ ಒಂದು ಘನತೆ, ಮರ್ಯಾದೆಯನ್ನು ಧಾರ್ಮಿಕ ಹಿನ್ನಲೆಯಲ್ಲಿ ಮಾಡುವ ಕಸುಬುಗಳಿಗೆ ಮೌಲ್ಯ ಕೊಟ್ಟಂತಹ 12ನೇ ಶತಮಾನದ ಬಸವಾದಿ ಶರಣರು ಎಂದು ಹೇಳಿದರು.
ದೇಶ ಮೂಢನಂಬಿಕೆಯ ತವರೂರು. ಮೌಡ್ಯಗಳನ್ನು ಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆಸಿಕೊಂಡ ದೇಶ. ಇವೆಲ್ಲಕ್ಕೂ ತಿಲಾಂಜಲಿ ಇಟ್ಟು, ಮೌಡ್ಯಗಳನ್ನು ಹೋಗಲಾಡಿಸಿದವರು ಬಸವಾದಿ ಪ್ರಮುಖರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ, ಕೊರಚ ಸಮಾಜದ ಜಿಲ್ಲಾ ಅಧ್ಯಕ್ಷ ವೈ.ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಧನಂಜಯ, ಕೊರಮ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ದ್ವಾರಕನಾಥ್, ಗೌರವ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷ ರಾಮಣ್ಣ, ಖಜಾಂಚಿ ಅಂಜಿನಮೂರ್ತಿ, ಸಹ ಕಾರ್ಯದರ್ಶಿ ಪರಮೇಶ್, ನಿರ್ದೇಶಕ ನರಸಿಂಹಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.





