ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು 2016- 17 ನೇ ಸಾಲಿನಲ್ಲಿ ಘೋಷಿಸಿ ಜಾನುವಾರುಗಳಿಗಾಗಿ ಗೋಶಾಲೆಯನ್ನು ತೆರೆದು ಜಾನುವಾರುಗಳ ನಿರ್ವಹಣೆಗಾಗಿ ಮೇವು ಖರೀದಿಗಾಗಿ 84 ಕೋಟಿ ರೂಪಾಯಿಗಳ ಹಣವನ್ನು ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ಬಿಡುಗಡೆ ಮಾಡಿತ್ತು. ಆ ಕೋಟ್ಯಾಂತರ ರೂಪಾಯಿ ಹಣದಲ್ಲಿ ಬರೋಬ್ಬರಿ 18 ಕೋಟಿಯಷ್ಟು ಹಣವನ್ನು ಅಧಿಕಾರಿಗಳು ದುರುಪಯೋಗ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಚಿತ್ರದುರ್ಗ ಜಿಲ್ಲೆಯು ಸ್ವಾತಂತ್ರ್ಯ ಬಂದಾಗಿನಿಂದಲೂ ಕೂಡ 60 ಬಾರಿ ಬರಗಾಲಕ್ಕೆ ತುತ್ತಾಗಿದೆ. ಹಾಗೆಯೇ 2016- 17 ನೇ ಸಾಲಿನಲ್ಲಿ ಕೂಡ ಜಿಲ್ಲೆಯು ಬರಗಾಲಕ್ಕೆ ತುತ್ತಾಗಿತ್ತು. ಇದರಿಂದ ಆಗಿನ ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಿಸಿತ್ತು. ಜನ ಜಾನುವಾರುಗಳು ಗುಳೆ ಹೋಗುವುದನ್ನು ತಡೆಗಟ್ಟಲು ನರೇಗಾ ಯೋಜನೆಯಲ್ಲಿ ಕೂಲಿ ಕೆಲಸ ಕೊಟ್ಟರೆ ಜಾನುವಾರುಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿ ಅಡಿಯಲ್ಲಿ ಗೋಶಾಲೆಗಳನ್ನು ತೆರೆದು ಅದರಲ್ಲಿ ಬರುವ ಜಾನುವಾರುಗಳಿಗೆ ಮೇವು ವಿತರಿಸಿ ಅವುಗಳ ರಕ್ಷಣೆಯ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ನೀಡಿತ್ತು. ಇದಕ್ಕಾಗಿ ಜಿಲ್ಲೆಗೆ ಅಂದಿನ ಸರ್ಕಾರ 84 ಕೋಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಚಳ್ಳಕೆರೆ ತಾಲೂಕಿಗೆ 30 ಕೋಟಿ ಬಿಡುಗಡೆ ಮಾಡಿದ್ದರೆ ಅದರಲ್ಲಿ ಸೇರಿ 18 ಕೋಟಿ 60 ಲಕ್ಷ ಅನುದಾನ ಅವ್ಯವಹಾರವಾಗಿದೆ. ಇಷ್ಟೂ ಅನುದಾನಕ್ಕೆ ಮೇವು ಸರಬರಾಜು ಮಾಡಿದ್ದೇವೆ ಎಂದು ನಕಲಿ ಬಿಲ್ ಹಾಗೂ ನಕಲಿ ಟಿನ್ ನಂಬರ್ ಹಾಗೂ ನಕಲಿ ಟೆಂಡರ್ ದಾರರನ್ನು ಸೃಷ್ಠಿಸಿ 18 ಕೋಟಿ 60 ಲಕ್ಷ ಹಣವನ್ನು ಸಂಪೂರ್ಣ ಗುಳುಂ ಮಾಡಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ಆಲಘಟ್ಟದ ಈ. ರವಿ ಆರೋಪಿಸಿದ್ದಾರೆ. ಚಳ್ಳಕೆರೆ ತಾಲೂಕಿನಲ್ಲಿ ಗೋಶಾಲೆಗಳಿಗೆ 30 ಕೋಟಿ ಹಾಗೂ ಚಿತ್ರದುರ್ಗ ತಾಲೂಕಿಗೆ 7 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು, ಅದೂ ಕೂಡ ನಕಲಿ ದಾಖಲೆಗಳನ್ನು ಸೃಷ್ಠಿಸಿ 60 ಲಕ್ಷ ನುಂಗಿದ್ದಾರೆ. ಸರ್ಕಾರ ಬಿಡುಗಡೆ ಮಾಡಿದ ಅನುದಾನ 45 ಲಕ್ಷದ 98 ಸಾವಿರದಲ್ಲಿ ಕ್ರೆಡಿಟ್ ಬಿಲ್ ನಂಬರ್ 1 ರಿಂದ 4 ರವರೆಗೆ ಬಿಲ್ ಗಳಲ್ಲಿನ ಟಿನ್ ನಂಬರಿಗೂ ಹಾಗೂ ಸರಬರಾಜು ಮಾಡಿ ಬಿಲ್ ಕೊಟ್ಟಿರುವ ಬಿಲ್ ಗು ಒಂದಕ್ಕೊಂದು ತಾಳೆಯೇ ಇಲ್ಲ, ಇನ್ನೊಂದು ಖಾತೆಯಲ್ಲಿ 9 ಲಕ್ಷದ 94 ಸಾವಿರ ಅನುದಾನಕ್ಕೆ 1 ರಿಂದ 2 ಬಿಲ್ ಗಳಲ್ಲಿ ಟಿನ್ ನಂಬರೇ ಇಲ್ಲ, ದಿನಾಂಕವನ್ನು ನಮೂದಿಸಿಲ್ಲ, ಇನ್ನು ಹಣ ಸಂದಾಯ ಮಾಡಿರುವ ರಶೀದಿಗಳಲ್ಲಿ ದಿನಾಂಕ, ಕಿಲೋ ಮೀಟರ್, ಚಕ್ ಸಂಖ್ಯೆ, ಟ್ರಾಕ್ಟರ್ ನಂಬರ್ ನಮೂದು ಮಾಡದೆ ಸುಮಾರು 4 ಲಕ್ಷದ 45 ಸಾವಿರ ಹಣವನ್ನು ವಂಚನೆ ಮಾಡಲಾಗಿದೆ ಎಂದು ತಿಳಿದು ಬಂದರೆ, ಕ್ರೆಡಿಟ್ ಬಿಲ್ ನಂಬರ್ 1 ರಿಂದ 43 ಪುಟಗಳ ಸಂಖ್ಯೆಯಲ್ಲಿ ಭ್ರಷ್ಠಾಚಾರ ಮಾಡಿರುವುದು ಕಂಡುಬಂದಿದೆ. ಆದರೆ ಇದೆಲ್ಲವನ್ನು ಲೆಕ್ಕ ಪರಿಶೋಧಕರಿಂದ ಪರಿಶೋಧನೆ ಮಾಡಿಸದೆ ವಂಚಿಸಲಾಗಿದೆ ಎಂದು ಆಲಘಟ್ಟದ ಆರ್ ಟಿ ಐ ಕಾರ್ಯಕರ್ತ ಈ. ರವಿ ಆರೋಪಿಸಿದ್ದಾರೆ. ಈ ಎಲ್ಲಾ ದಾಖಲೆಗಳಿಂದ ಅಧಿಕಾರಿಗಳು ನಕಲಿ ಬಿಲ್ ಗಳನ್ನು ಸರ್ಕಾರಕ್ಕೆ ನೀಡಿ ಚಿತ್ರದುರ್ಗ ತಾಲೂಕಿನಲ್ಲಿ 60 ಲಕ್ಷ ಹಣವನ್ನು ಭ್ರಷ್ಠಾಚಾರ ಮಾಡಿದ್ದಾರೆ ಎನ್ನಲಾಗಿದೆ. ಇನ್ನು ಚಳ್ಳಕೆರೆ ತಾಲೂಕಿನಲ್ಲಿ ಕೂಡ 30 ಕೋಟಿ 52 ಲಕ್ಷದ 83 ಸಾವಿರ ಅನುದಾನ ಬಿಡುಗಡೆ ಮಾಡಿತ್ತು. ಇಷ್ಟು ಅನುದಾನದಲ್ಲಿ ಬ್ರಹ್ಮಾಂಡ ಭ್ರಷ್ಠಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇಲ್ಲಿಯೂ ಕ್ರೆಡಿಟ್ ಬಿಲ್ 1 ರಿಂದ 14 ರವರೆಗೂ ಟಿನ್ ನಂಬರಿಗೂ ಹಾಗೂ ಮೇವು ಸರಬರಾಜು ದಾರರಿಗೂಹೊಂದಾಣಿಕೆಯೇ ಇಲ್ಲದೆ ನಕಲಿ ಬಿಲ್ ಗಳನ್ನು ಸೃಷ್ಠಿಸಿ ಇದರಲ್ಲಿ 6 ಕೋಟಿ 10 ಲಕ್ಷದ 57 ಸಾವಿರ ವಂಚನೆ ಮಾಡಲಾಗಿದೆ. ಕ್ರೆಡಿಟ್ ಬಿಲ್ ನಂಬರ್ 1 ರಿಂದ 16 ರವರೆಗಿನ ಬಿಲ್ ಗಳಲ್ಲಿಯೂ ಕೂಡ ಟಿನ್ ನಂಬರ್ ಹಾಗೂ ಮೇವು ಸರಬರಾಜು ಬಿಲ್ ಗಳಿಗೂ ಹೊಂದಾಣಿಕೆ ಇಲ್ಲ, ಇಲ್ಲಿಯೂ ಕೂಡ ನಕಲಿ ಬಿಲ್ ಸೃಷ್ಠಿಸಲಾಗಿದ್ದು,5,15,93, 497 ರೂಪಾಯಿಗಳ ವಂಚಿಸಲಾಗಿದೆ. ಇನ್ನು ಕ್ರೆಡಿಟ್ ಬಿಲ್ ನಂಬರ್ 1 ರಿಂದ 14 ರವರೆಗಿನ ಬಿಲ್ ಗಳಲ್ಲಿ 7,36,81,811 ರೂಪಾಯಿಗಳನ್ನು ವಂಚಿಸಲಾಗಿದೆ. ಇಲ್ಲಿಯೂ ಕೂಡ ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಿಸಿಲ್ಲದೆ ಇರುವುದು ಕಂಡು ಬರುತ್ತದೆ. ಇದರಿಂದ ಚಳ್ಳಕೆರೆ ತಾಲೂಕಿನ ಬಿಡುಗಡೆಯಾಗಿದ್ದ 18,63,32 ,370 ರೂಪಾಯಿಗಳು ವಂಚನೆಯಾಗಿರುವುದು ನಕಲಿ ಬಿಲ್ ಗಳಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ.ಇದರಿಂದ ಕೂಲಂಕುಷವಾಗಿ ದಾಖಲೆಗಳನ್ನು ಪರಿಶೀಲಿಸಿ, ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಆರ್ ಟಿ ಐ ಕಾರ್ಯಕರ್ತ ಈ. ರವಿ ಆಲಘಟ್ಟ ದೂರನ್ನು ನೀಡಿದ್ದಾರೆ.





