ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ನಿರ್ಲಕ್ಷೆ ವಹಿಸುತ್ತಿರುವ ವೈದ್ಯರುಗಳನ್ನು ತಕ್ಷಣವೆ ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಶುಕ್ರವಾರ ಧರಣಿ ನಡೆಸಿದ ರಾಷ್ಟ್ರೀಯ ಪ್ರಬುದ್ದ ಸೇನೆ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದರು.

ಮಧ್ಯಕರ್ನಾಟಕದ ಬಯಲುಸೀಮೆ ಬರಪೀಡಿತ ಚಿತ್ರದುರ್ಗದಲ್ಲಿ ಆದಷ್ಟು ಬೇಗನೆ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭಗೊಳ್ಳಬೇಕು.
ಸರ್ಕಾರಿ ಆಸ್ಪತ್ರೆಯಲ್ಲಿರುವ ವೈದ್ಯರುಗಳು ನಿವೃತ್ತಿಯಾಗುವತನಕ ಖಾಸಗಿ ಆಸ್ಪತ್ರೆಗಳನ್ನು ತೆರೆಯಲು ಅವಕಾಶ ಕೊಡಬಾರದು.
ಸರ್ಕಾರಿ ವೈದ್ಯರುಗಳ ಖಾಸಗಿ ಆಸ್ಪತ್ರೆಗಳು ಇದ್ದಲ್ಲಿ ತಾತ್ಕಾಲಿಕವಾಗಿ ಮುಚ್ಚಬೇಕು.
ಬಡ ರೋಗಿಗಳಿಗೆ ಹೊರಗಿನಿಂದ ಔಷಧಿಗಳನ್ನು ತರುವಂತೆ ಜಿಲ್ಲಾಸ್ಪತ್ರೆಯಲ್ಲಿನ ವೈದ್ಯರುಗಳು ಚೀಟಿಗಳನ್ನು ಬರೆದುಕೊಡುವುದು ನಿಲ್ಲಬೇಕು.
ಕಾರ್ಡಿಯಾಲಜಿಸ್ಟ್, ಯೂರಾಲಜಿಸ್ಟ್ ನುರಿತ ವೈದ್ಯರುಗಳನ್ನು ಕೂಡಲೆ ನೇಮಿಸಬೇಕು.
ಹೆಚ್ಚುತ್ತಿರುವ ಸಿಜಿರಿನ್ ಹೆರಿಗೆಗಳು ನಿಲ್ಲಬೇಕು.
ಆಸ್ಪತ್ರೆಯ ಒಳಗೆ ಸ್ವಚ್ಚತೆಯನ್ನು ಕಾಪಾಡುವುದು ಸೇರಿದಂತೆ ಒಟ್ಟು ಹನ್ನೆರಡು ಬೇಡಿಕೆಗಳನ್ನು ಈಡೇರಿಸುವಂತೆ ಧರಣಿನಿರತರು ಸರ್ಕಾರಕ್ಕೆ ಆಗ್ರಹಿಸಿದರು.
ರಾಷ್ಟ್ರೀಯ ಪ್ರಬುದ್ದ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಅವಿನಾಶ್ ಸಿ.ಎಲ್. ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಅನುಶ್, ಹನುಮಂತರಾಯ, ಕರಿಯಣ್ಣ, ಮಂಜಪ್ಪ, ರಮೇಶ್, ಕೃಷ್ಣಪ್ಪ ಇವರುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





