ಮಲೇರಿಯಾ ನಿರ್ಮೂಲನೆ ಎಲ್ಲರ ಜವಾಬ್ದಾರಿಯಾಗಿರಲಿ:ಸಿಇಒ ಸೋಮಶೇಖರ್
ಚಿತ್ರದುರ್ಗ: ಏ.25:
ಮಲೇರಿಯಾ ನಿರ್ಮೂಲನೆ ಎಲ್ಲರ ಜವಾಬ್ದಾರಿಯಾಗಿರಲಿ ಎಂದು ಜಿ ಪಂ ಎಸ್.ಜೆ.ಸೋಮಶೇಖರ್ ಹೇಳಿದರು.
ಇಲ್ಲಿನ ಬುದ್ಧನಗರದ ನಗರ ಆರೋಗ್ಯ ಕೇಂದ್ರದ ಮುಂಭಾಗಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಜನ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಕೀಟಗಳಿಂದ ಹರಡುವ ರೋಗಗಳಲ್ಲಿ ಮಲೇರಿಯಾ ರೋಗವು ಒಂದು. ಈ ಹಿಂದೆ ಮಲೇರಿಯಾ ರೋಗ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿತ್ತು. ಈಗ ಮಲೇರಿಯಾ ನಿರ್ಮೂಲನೆ ಹಂತಕ್ಕೆ ತಲುಪಿದೆ. ಸಾರ್ವಜನಿಕರ ಸಹಕಾರದೊಂದಿಗೆ ಮಲೇರಿಯಾ ಮುಕ್ತ ಜಿಲ್ಲೆಯಾಗಿಸೋಣ ಎಂದರು.ಡಿಹೆಚ್ ಓ ಡಾ.ಜಿ.ಪಿ.ರೇಣುಪ್ರಸಾದ್ ಮಾತಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನ ಆಚರಿಸುತ್ತಿದ್ದು, ಈ ವರ್ಷದ ಧ್ಯೇಯವಾಕ್ಯ “ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರು ಹೂಡಿಕೆ ಮಾಡಿ. ಮರು ಕಲ್ಪನೆ ಮಾಡಿ. ಮರು ಉತ್ತೇಜನ ನೀಡೋಣ ,2027 ರ ವೇಳೆಗೆ ಕರ್ನಾಟಕ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸಿ ಗುರಿ ಸಾಧಿಸ ಬೇಕಾಗಿರುವುದರಿಂದ ಎಲ್ಲಾ ಹಂತಗಳಲ್ಲಿಯೂ ಮಲೇರಿಯಾ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಕೀಟಜನ್ಯ ರೋಗಗಳ ನಿವಾರಣಾಧಿಕಾರಿ ಡಾ.ಕಾಶಿ ಮಾತನಾಡಿ, 2023 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಮಲೇರಿಯಾ ಪ್ರಕರಣ ವರದಿಯಾಗಿರುವುದಿಲ್ಲ ಎಂದರು.
ಚಿತ್ರದುರ್ಗ ನಗರದ ಬುದ್ಧ ನಗರದಿಂದ ಪ್ರಾರಂಭವಾಗುವ ಜನ ಜಾಗೃತಿ ಜಾಥಾವು ಶುದ್ಧ ಕುಡಿಯುವ ನೀರಿನ ರಸ್ತೆ ಪ್ರಶಾಂತ ನಗರ, ಶಾಸಕರಾದ ಚಂದ್ರಪ್ಪ ಮನೆ ಹತ್ತಿರದ ಮಾರ್ಗವಾಗಿ ಪರಿಸರ ಕಟ್ಟಡದಿಂದ ಆರೋಗ್ಯ ಕೇಂದ್ರ ಬುದ್ಧ ನಗರದವರೆಗೆ ಜನ ಜಾಗೃತಿ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಒ.ಸುಧಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ವೈದ್ಯಾಧಿಕಾರಿಗಳಾದ ಡಾ.ಸುರೇಂದ್ರ, ಡಾ.ಬಿಲಾಲ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್.ಎಸ್.ಮಂಜುನಾಥ, ಬಿ.ಮೂಗಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಶ್ರೀನಿವಾಸ, ನಾಗರಾಜ್, ಮಳಲಿ ಶ್ರೀನಿವಾಸ,ಇತರರಿದ್ದರು.





