ಚಿತ್ರದುರ್ಗದ ರೈಲ್ವೆ ಯೋಜನೆಗಳಿಗೆ ವೇಗ ನೀಡಿ : ಸಂಸದ ಗೋವಿಂದ ಕಾರಜೋಳ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳಿಗೆ ವೇಗ ನೀಡಿ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ದೆಹಲಿಯಲ್ಲಿಂದು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‍ರವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಚಿತ್ರದುರ್ಗ ಐತಿಹಾಸಿಕ ಹಿನ್ನೆಲೆಯುಳ್ಳ ತಾಣವಾಗಿರುವುದರ ಜೊತೆಗೆ ಮೈಸೂರು ರೈಲ್ವೆ ವಲಯದಲ್ಲಿಯೇ ಅತಿ ಹೆಚ್ಚು ಆದಾಯವನ್ನು ಕಬ್ಬಿಣದ ಅದಿರು ಹಾಗೂ ಮ್ಯಾಂಗನೀಸ್ ಅದಿರನ್ನು ಸಾಗಾಟ ಮಾಡುವ ಮೂಲಕ ರೈಲ್ವೆ ಇಲಾಖೆಗೆ ಚಿತ್ರದುರ್ಗ ಜಿಲ್ಲೆ ತಂದುಕೊಡುತ್ತಿದೆ, ಹೀಗಿದ್ದೂ ಕೂಡ ಚಿತ್ರದುರ್ಗಕ್ಕೆ ಅಭಿವೃಧ್ದಿಯ ದೃಷ್ಟಿಯಿಂದ ಹೆಚ್ಚಿನ ಪ್ರಾಮುಖ್ಯತೆ ರೈಲ್ವೆ ಸಚಿವಾಲಯದಿಂದ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಚಾಲನೆಯಲ್ಲಿರುವ ಯೋಜನೆಗಳಿಗೆ ವೇಗ ನೀಡುವುದರ ಜೊತೆಗೆ ಹೊಸ ಯೋಜನೆಗಳನ್ನು ಮಂಜೂರು ಮಾಡುವಂತೆ ದೆಹಲಿಯಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್‍ರವರನ್ನು ಸಂಸದ ಗೋವಿಂದ ಕಾರಜೊಳ್‍ರವರು ಭೇಟಿ ಮಾಡಿ ಮನವಿ ಮಾಡಿದರು.ಚಿತ್ರದುರ್ಗ ಐತಿಹಾಸಿಕ ಹಿನ್ನೆಲೆಯುಳ್ಳದ್ದಾಗಿರುವುದರಿಂದ ಈಗಾಗಲೇ “ಅಮೃತ್ ಭಾರತ್ ನಿಲ್ದಾಣ” ಯೋಜನೆಯಡಿ ಚಿತ್ರದುರ್ಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ನಿಲ್ದಾಣ ಕಾಮಗಾರಿಯಲ್ಲಿ ಐತಿಹಾಸಿಕ ಪರಂಪರೆಯನ್ನು/ವೈಭವವನ್ನು ಬಿಂಬಿಸುವ ವಾಸ್ತುಶಿಲ್ಪವನ್ನು ಅಳವಡಿಸಿ ನಿಲ್ದಾಣದ ಮುಂಭಾಗದ ಕೋಟೆಯ ಮಾದರಿಯನ್ನು ಹೋಲುವಂತೆ ನಿರ್ಮಾಣ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು.
ಈಗಾಗಲೇ ಶೇಕಡ 50:50 ರ ವೆಚ್ಚ ಹಂಚಿಕೆ ಆಧಾರದಲ್ಲಿ ಪ್ರಗತಿಯಲ್ಲಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗವು ಕರ್ನಾಟಕ ರಾಜ್ಯದ ಪಾಲನ್ನು ಬಿಡುಗಡೆ ಮಾಡದೇ ಇರುವ ಕಾರಣ ನಿಧಾನ ಗತಿಯಲ್ಲಿ ಸಾಗುತ್ತಿದೆ. ಪ್ರಯುಕ್ತ, ರಾಜ್ಯ ಸರ್ಕಾರದ ಪಾಲನ್ನು ಶೀಘ್ರವಾಗಿ ನೀಡಲು ನಿರ್ದೇಶನ ನೀಡುವುದು.
ರಾಯದುರ್ಗ-ತುಮಕೂರು ರೈಲು ಮಾರ್ಗದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ, ಅಗತ್ಯವಾಗಿರುವ ಅನುದಾನವನ್ನು ಆದಷ್ಟು ಬೇಗ ಒದಗಿಸುವ ಮೂಲಕ ಶೀಘ್ರವಾಗಿ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು.ಚಳ್ಳಕೆರೆ ನಗರದಲ್ಲಿ ಚಳ್ಳಕೆರೆ-ಪರಶುರಾಂಪುರ ರಸ್ತೆಯಲ್ಲಿ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ 45 ಕ್ಕೆ ಮೇಲು ಸೇತುವೆ ನಿರ್ಮಾಣ ಮಾಡಬೇಕು.ಹೊಸದುರ್ಗ ರೋಡ್ ರೈಲ್ವೆ ಸ್ಟೇಷನ್‍ನಲ್ಲಿ ವಾಸ್ಕೋಡಿಗಾಮ-ಯಶವಂತಪುರ ಡೈಲಿ ಎಕ್ಸ್‍ಪ್ರೆಸ್, ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‍ಪ್ರೆಸ್, ಚಾಲುಕ್ಯ ಎಕ್ಸ್‍ಪ್ರೆಸ್, ಗೋಲಗುಂಬಜ್ ಎಕ್ಸ್‍ಪ್ರೆಸ್ ಟ್ರೈನುಗಳಿಗೆ ನಿಲುಗಡೆ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.