ಹೊಳಲ್ಕೆರೆ,ಅ18 : ಸಾರ್ವಜನಿಕರ ಬದುಕನ್ನು ಸ್ವಂತ ಬದುಕೆಂದು ಅರ್ಥೈಸಿಕೊಂಡು ಸಮಸ್ಯೆ ಹುಡುಕಿ ಪರಿಹಾರದ ಕೆಲಸ ಮಾಡುತ್ತಿದ್ದೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.
ಸಿರಿಗೆರೆ ಹೋಬಳಿಯ ಗೌರಮ್ಮನಹಳ್ಳಿ ಗ್ರಾಮದಲ್ಲಿ 1.55 ಕೋಟಿ ರೂ.ವೆಚ್ಚದಲ್ಲಿ ಗೋಕಟ್ಟೆ ಅಭಿವೃದ್ದಿ ಕಾಮಗಾರಿ, ನೂತನ ಸಿ.ಸಿ.ರಸ್ತೆ, ಅಂಗನವಾಡಿ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತಾಡಿ,
ಮುಸಲ್ಮಾನರಿಗೆ ಪ್ರಾರ್ಥನೆಗೆ ದಾರಿ ಮಾಡಿಕೊಟ್ಟಿದ್ದೇನೆ. ಗಿಡಗಂಟೆ ತೆಗೆಸಿ ಬೋರ್ ಹಾಕಿಸಿ ಸುತ್ತಲೂ ಕಾಂಪೌಂಡ್ ಕಟ್ಟಿಸಿದ್ದೇನೆ. ಶಾದಿ ಮಹಲ್ ಕಟ್ಟವುದಕ್ಕೆ ಸಿಎಂ. ಬಳಿ ಹೋಗಿ ಹಣ ಕೊಡಿ ಎಂದು ಕೇಳಿ 2.5 ಕೋಟಿ ತಂದು ಕೊಟ್ಟಿದ್ದೇನೆ. ಒಟ್ಟು 3.5 ಕೋಟಿ ನೀಡಿದ್ದೇನೆ. ಮುಸಲ್ಮಾನರು ಅಲ್ಲಾನನ್ನು ಪ್ರಾರ್ಥಿಸುತ್ತಾರೆ. ಹಿಂದೂಗಳು ದೇವರನ್ನು ಪೂಜಿಸುತ್ತಾರೆ. ಸಕಲ ಜೀವರಾಶಿಗಳಿಗೂ ಒಳಿತನ್ನೆ ಎಲ್ಲರು ಬಯಸುವುದು. ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೌರವಿಸುವವರು ಯಾರು ಎನ್ನುವುದು ಜನರ ಮನದಲ್ಲಿರಬೇಕೆಂದರು.
ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಹೊಳಲ್ಕೆರೆ ತಾಲ್ಲೂಕು ಹಾಗೂ ಭರಮಸಾಗರ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಪ್ರತಿ ಮನೆ ಮನೆಗೆ ಶುದ್ದ ಕುಡಿಯುವ ನೀರು ಪೂರೈಸಲಾಗುವುದು. ಎಲ್ಲಾ ಕಡೆ ಸಿ.ಸಿ.ರಸ್ತೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ, ಬಸ್‍ನಿಲ್ದಾಣ ನಿರ್ಮಿಸಿದ್ದೇನೆ. ರೈತರ ತೋಟಗಳು ಒಣಗಬಾರದೆಂದು ತಾಲ್ಲೂಕಿನಾದ್ಯಂತ ಹದಿನೇಳು ಪವರ್‍ಸ್ಟೇಷನ್‍ಗಳನ್ನು ಕಟ್ಟಲಾಗಿದೆ. ಭರಮಸಾಗರದಲ್ಲಿ ಒಂದು ಸಾರಿ ಗೆದ್ದವರು ಎರಡನೆ ಬಾರಿಗೆ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಜನ ಮಾತಾಡುತ್ತಿದ್ದರು. ಪ್ರಥಮ ಬಾರಿಗೆ ಗೆದ್ದು ಐದು ವರ್ಷಗಳಲ್ಲಿ ಎಲ್ಲಾ ಹಳ್ಳಿಗಳಲ್ಲಿಯೂ ರಸ್ತೆ ಮಾಡಿಸಿದ್ದರಿಂದ ರಸ್ತೆ ರಾಜ ಎನ್ನುವ ಬಿರುದು ನೀಡಿ ಮತ್ತೆ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿದರು. ಒಂದು ಕೋಟಿ ರೂ.ಗಳಲ್ಲಿ ಕೆರೆ ರಿಪೇರಿ ಮಾಡಿಸುತ್ತೇನೆಂದು ತಿಳಿಸಿದರು.
ಮೊಹಮದ್ ಬೇಗ್, ಇಬ್ರಾಹಿಂಸಾಬ್, ಇಸಾಕ್‍ಸಾಬ್, ಸಮೀವುಲ್ಲಾಖಾನ್, ಸೈಯದ್ ಅತೀಕ್ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು





