ಗೃಹಲಕ್ಷ್ಮಿ ಯೋಜನೆ ಚುನಾವಣಾ ಲಕ್ಷ್ಮಿಯಾಗಿ ಪರಿವರ್ತನೆ: ವಿಜಯೇಂದ್ರ ಟೀಕೆ

ಜಿಲ್ಲಾ ಸುದ್ದಿ ದೇಶ ರಾಜಕೀಯ ರಾಜ್ಯ
Spread the love

 

ಚಿತ್ರದುರ್ಗ:

ಮುಖ್ಯಮಂತ್ರಿಗಳು ಗ್ಯಾರಂಟಿಗಳಿಂದ ಬೀಗುತ್ತಿದ್ದಾರೆ. ನಿಮ್ಮ ಗ್ಯಾರಂಟಿಗಳ ಬಗ್ಗೆ ಅಷ್ಟೊಂದು ವಿಶ್ವಾಸ ಇದ್ದರೆ ಸಿಎಂ,ಯಾಕೆ 15 ದಿನಗಳ ಕಾಲ ಬಾಗಲಕೋಟೆಗೆ ಬಂದು ಕೂರಬೇಕಾಗಿತ್ತು, ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ, ಉಪ ಚುನಾವಣೆಯ ಸೋಲಿನಿಂದ ಹತಾಶರಾಗುವ ಪ್ರಶ್ನೆಯಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಂಥ ದಿಟ್ಟ ನಾಯಕತ್ವ ದೇಶಕ್ಕೆ ಸಿಕ್ಕಿದೆ. ನಿತಿನ್ ನವೀನ್ ಜೀ ಒಬ್ಬ ಯುವ ರಾಷ್ಟ್ರೀಯ ಅಧ್ಯಕ್ಷರು ನೇತೃತ್ವ ವಹಿಸಿಕೊಂಡಿದ್ದಾರೆ. ಅಮಿತ್ ಶಾ ಜೀ ಚುನಾವಣಾ ಚಾಣಕ್ಯ ನಮ್ಮ ಜೊತೆಗಿದ್ದಾರೆ. ಉಪ ಚುನಾವಣೆ ಸೋಲಿಗೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು. ಗೃಹಲಕ್ಷ್ಮಿ ಯೋಜನೆ ಇವತ್ತು ಚುನಾವಣಾ ಲಕ್ಷ್ಮಿಯಾಗಿ ಪರಿವರ್ತನೆಯಾಗಿದೆ. ಇವರು ಬಡವರಿಗೆ ಯೋಜನೆಗಳನ್ನು ನೀಡಲಿ. ಇವರೊಬ್ಬರೇ ಯೋಜನೆಗಳನ್ನು ನೀಡಿಲ್ಲ. ಯಡಿಯೂರಪ್ಪನವರು ಹಿಂದೆ ಭಾಗ್ಯಲಕ್ಷ್ಮಿ, ಸಂಧ್ಯಾ ಸುರಕ್ಷಾ, ಬೈಸಿಕಲ್ ಯೋಜನೆಗಳನ್ನು ನೀಡಿದ್ದರು. ಇನ್ನೂ ಹಲವು ಒಳ್ಳೆಯ ಯೋಜನೆ ಕೊಟ್ಟಿದ್ದಾರೆ. ಆದರೆ, ಗೃಹಲಕ್ಷ್ಮಿ ಇವತ್ತು ಚುನಾವಣಾ ಲಕ್ಷ್ಮಿಯಾಗಿರುವುದು ಖಂಡಿತ ಸರಿಯಲ್ಲ ಎಂದು ಆಕ್ಷೇಪಿಸಿದರು. ಪ್ರತಿ ತಿಂಗಳ ಬದಲು ಅದನ್ನು ತಡೆಹಿಡಿದು ಉಪ ಚುನಾವಣೆಯಲ್ಲಿ ಮೊನ್ನೆ ಬಿಡುಗಡೆ ಮಾಡಿದ್ದಾರೆ. ಇನ್ನು ಮುಂದಿನ ಕಂತನ್ನು ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಾಗಲೇ ಬಿಡುಗಡೆ ಮಾಡಲಿದ್ದಾರೆ. ಇವರು ಜನರಿಗೆ ಆಮಿಷವೊಡ್ಡುವ ರೀತಿ ಯೋಜನೆ ನೀಡುತ್ತಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಇದ್ದಾಗ ದೂರದೃಷ್ಟಿಯಿಂದ ಭಾಗ್ಯಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ತಂದಿದ್ದರು. ಈ ಉಪ ಚುನಾವಣೆ ಸೋಲಿನಿಂದ ಬಿಜೆಪಿ, ಬಿಜೆಪಿ ಕಾರ್ಯಕರ್ತರು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ. ಇವೆಲ್ಲವನ್ನೂ ಮೀರಿ ಸಂಘಟನೆ ಬಲಪಡಿಸುತ್ತೇವೆ. ಹಿರಿಯರ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಸರಕಾರ ತರುತ್ತೇವೆ ಎಂದರು. ಜನರ ಕ್ಷಮೆ ಕೇಳಲು ಒತ್ತಾಯ:ಮತಗಳ್ಳತನದ ವಿರುದ್ಧ ರಾಹುಲ್ ಗಾಂಧಿಯವರು ಪ್ರವಾಸ ಮಾಡಿದ್ದರು. ರಾಜ್ಯ ಹೈಕೋರ್ಟಿನ ಆದೇಶದಂತೆ ಶೃಂಗೇರಿಯಲ್ಲಿ ಮರು ಮತ ಎಣಿಕೆ ನಡೆದು ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಗೆದ್ದಿದ್ದಾರೆ. ರಾಹುಲ್ ಗಾಂಧಿಯವರು ಈಗ ದೇಶದ ಜನರ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಸ್ಪೀಕರ್ ರಾಜಕಾರಣ ಮೀರಿ ನಡೆದುಕೊಳ್ಳಬೇಕು. ಮಾನ ಮರ್ಯಾದೆ ಇದ್ದರೆ ಸಭಾಧ್ಯಕ್ಷರು ಅವರಿಗೆ ತಕ್ಷಣ ಪ್ರಮಾಣವಚನ ಬೋಧಿಸಬೇಕು. ಆದರೆ, ಸಭಾಧ್ಯಕ್ಷರು ತಮ್ಮ ಸಾಂವಿಧಾನಿಕ ಸ್ಥಾನಕ್ಕೆ ಅಪಚಾರ ಮಾಡುತ್ತಿದ್ದಾರೆಂದು ಆಕ್ಷೇಪಿಸಿದರು. ಅವರು ರಾಜಕಾರಣ ಮೀರಿ ನಡೆದುಕೊಳ್ಳಲಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ಸಿನವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆಂದು ದೂರಿದರು. ಸ್ಪೀಕರ್ ರಾಜಕಾರಣ, ರಾಜಕಾರಣಿಗಳ ಒತ್ತಡಕ್ಕೆ ಮಣಿಯದೇ ನ್ಯಾಯಯುತವಾಗಿ ನಡೆದುಕೊಳ್ಳಲಿ. ಕೂಡಲೇ ಜೀವರಾಜ್ ಅವರಿಗೆ ಪ್ರಮಾಣವಚನ ಬೋಧಿಸಲಿ ಎಂದು ಮನವಿ ಮಾಡಿದರು. ಪರಾಜಿತ ಅಭ್ಯರ್ಥಿ ರಾಜೇಗೌಡರು ಹೈಕೋರ್ಟಿಗೆ ಹೋಗಲು ಸಮಯಾವಕಾಶ ಕೊಡಲು ಕಟ್ಟುಕಥೆ ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಬಾಬಾಸಾಬೇಬ ಅಂಬೇಡ್ಕರ್, ಸಂವಿಧಾನದ ಬಗ್ಗೆ ಕಾಂಗ್ರೆಸ್ಸಿನವರು ಬಹಳ ಮುದ್ದುಮುದ್ದಾಗಿ ಮಾತನಾಡುತ್ತಾರೆ. ಆದರೆ, ಡಾ. ಬಾಬಾಸಾಬೇಬ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸವನ್ನು ಕಾಂಗ್ರೆಸ್ಸಿನವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

 

 

Leave a Reply

Your email address will not be published. Required fields are marked *