ರೋಗ ತಡೆಗೆ ಕೈತೊಳೆಯುವುದು ಅತ್ಯಂತ ಪರಿಣಾಮಕಾರಿ: ಜಿ.ಪಂ ಯೋಜನಾ ನಿರ್ದೇಶಕಿ ಕೆ.ಜಯಲಕ್ಷ್ಮಿ
ಚಿತ್ರದುರ್ಗ,:ಅ.15:
ರೋಗ ತಡೆಗಟ್ಟುವಿಕೆ, ರೋಗಗಳು ಹರಡುವಿಕೆಯನ್ನು ತಡೆಗಟ್ಟಲು ಕೈ ತೊಳೆಯುವುದು ಅತ್ಯಂತ ಪರಿಣಾಮಕಾರಿ ಕ್ರಮಗಳಲ್ಲಿ ಒಂದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಕೆ.ಜಯಲಕ್ಷ್ಮಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿರುವ ವಾತ್ಸಲ್ಯ ಶಿಶುಪಾಲನಾ ಕೇಂದ್ರದಲ್ಲಿ ಬುಧವಾರ ವಿಶ್ವ ಕೈ ತೊಳೆಯುವ ದಿನಾಚರಣೆ ಅಂಗವಾಗಿ ವೈಯಕ್ತಿಕ ಸ್ವಚ್ಛತೆ, ಶುಚಿತ್ವ ಹಾಗೂ ಕೈತೊಳೆಯುವ ಮಹತ್ವದ ಕುರಿತು ಅವರು ಮಾತನಾಡಿದರು.
ಗ್ರಾಮೀಣ ಸಮುದಾಯ ಮತ್ತು ಮಕ್ಕಳಲ್ಲಿ ಕೈ ನೈರ್ಮಲ್ಯದ ಮಹತ್ವದ ಬಗ್ಗೆ ವ್ಯಾಪಕವಾದ ಅರಿವು ಮೂಡಿಸುವ ಅತ್ಯವಶ್ಯವಿದೆ ಎಂದು ತಿಳಿಸಿದರು.
ಶುದ್ಧ ಕುಡಿಯುವ ನೀರು, ನಿರ್ಮಲ ಪರಿಸರ ಹಾಗೂ ಉತ್ತಮ ಸ್ವಚ್ಛತೆಯ ಅಭ್ಯಾಸಗಳು ಜನರ ಜೀವನ ಸುಧಾರಣೆಯ ಪ್ರಮುಖ ಅಂಶಗಳಾಗಿವೆ. ಊಟಕ್ಕೆ ಮೊದಲು, ಶೌಚಕ್ಕೆ ಹೋದ ನಂತರ ಸೋಪಿನಿಂದ ಕೈ ತೊಳೆಯುವ ಅಭ್ಯಾಸವನ್ನು ಸಮುದಾಯದಲ್ಲಿ ವಿಶೇಷವಾಗಿ ಶಾಲೆ ಮತ್ತು ಅಂಗನವಾಡಿ ಮಕ್ಕಳಲ್ಲಿ ಉತ್ತೇಜಿಸುವ ಮಹತ್ವದ ಉದ್ದೇಶದಿಂದ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ “ಕೈ ತೊಳೆಯುವ ಹೀರೇ ಆಗಿರಿ” ಎಂಬ ವಿಷಯದೊಂದಿಗೆ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ವಿವಿಧ ಚಟುವಟಿಕೆಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಅವರು ಕೈ ತೊಳೆಯುವ ಮಹತ್ವದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾಧಿಕಾರಿ ಸುಮಾ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಸಮಾಲೋಚಕರಾದ ಪ್ರಮೀಳಾ, ಬಿ.ಸಿ.ನಾಗರಾಜ್, ಶಶಿಧರ್, ವಿನಯ್ ಕುಮಾರ್, ಅಭಿವೃದ್ಧಿ ಶಾಖೆ ವ್ಯವಸ್ಥಾಪಕಿ ವಿಶಾಲ, ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ನಾಡರ್, ಸಹಾಯಕ ಕಾರ್ಯಪಾಲ ಅಭಿಯಂತರರಾದ ಶಾಜೀದ, ವಾತ್ಸಲ್ಯ ಶಿಶುಪಾಲನಾ ಸಿಬ್ಬಂದಿ ಹಾಗೂ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಇದ್ದರು.





