ಹೊಳಲ್ಕೆರೆ : ತಾಲೂಕಿನ ತಾಳಿಕಟ್ಟೆ ವಡೇರಹಳ್ಳಿ ಕೆರೆ ಅಭಿವೃದ್ಧಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಮದ ರೇವಣ್ಣ ಆರೋಪಿಸಿದ್ದಾರೆ. ಹೊಳಲ್ಕೆರೆಯ ತಾಲೂಕು ಕಚೇರಿಯ ಮುಂದೆ ಏಕಾಂಗಿ ಪ್ರತಿಭಟನೆ ನಡೆಸಿ ಮಾತಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಕೆರೆಯ ಅಭಿವೃದ್ಧಿಗೆ 60 ಲಕ್ಷ ಮಂಜೂರಾಗಿತ್ತು. ಚಳ್ಳಕೆರೆ ತಾಲೂಕಿನ ಗುಡಿಬಂಡಯ್ಯ ಕಾಮಗಾರಿ ಗುತ್ತಿಗೆ ಪಡೆದಿದ್ದು, ಸಣ್ಣ ನೀರಾವರಿ ಇಲಾಖೆಯ ಎಇಇ ನಾಗರಾಜ್ ಗುತ್ತಿಗೆದಾರರಿಗೆ ಅಳತೆ ಪುಸ್ತಕ ಹಾಗೂ ಎಂಬಿ ಬರೆದುಕೊಟ್ಟಿದ್ದಾರೆಂದು ಆರೋಪಿಸಿದ್ದಾರೆ. ಕೆರೆಯಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದು, ಏರಿ ಮತ್ತು ಕೋಡಿ ಕಲ್ಲುಗಳು ಕಿತ್ತು ಹೋಗಿವೆ. ಕೆರೆಯಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಗುತ್ತಿಗೆದಾರ ಮತ್ತು ಸಣ್ಣ ನೀರಾವರಿ ಇಲಾಖೆಯ ಎಇಇ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಶಾಸಕ ಎಂ. ಚಂದ್ರಪ್ಪ ನೈತಿಕಹೊಣೆ ಹೊತ್ತು ರಾಜೀನಾಮೆ ನೀಡುವಂತೆ ರೇವಣ್ಣ ಒತ್ತಾಯಿಸಿದ್ದಾರೆ.