ಚಿತ್ರದುರ್ಗ:ಹೊಸ ಪರಿಚಯದೊಂದಿಗೆ ನಾಯಕನಟನಾಗಿ ಚಿತ್ರದುರ್ಗದ ರಘುರಾಮ್ ಎನ್ನುವ ಯುವಕನನ್ನಿಟ್ಟುಕೊಂಡು ಉತ್ತಮ ಸಂದೇಶ, ಹಾಗು ಸಸ್ಪೆನ್ಸ್ ಹಾರರ್ ಕಥೆಯನ್ನಿಟ್ಟುಕೊಂಡು ಮಾಯಾವಿ ಎನ್ನುವ ಹೆಸರಿನ ಸಿನಿಮಾ ಮಾಡುತ್ತಿದ್ದೇವೆ. ಇದರ ಮುಹೂರ್ತ 17 ರಂದು ನಗರದ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ನಿರ್ದೇಶಕ ಶಂಕರ್ ಜಿ ತಿಳಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಉತ್ತಮ ಕಥೆಯನ್ನು ಮಾಡುತ್ತಿದ್ದೇವೆ. ಕಥೆಯಲ್ಲಿ ಸಂದೇಶವಿದೆ. ಹಾಗೆಯೇ ಚಿತ್ರದಲ್ಲಿ ಸಸ್ಪೆನ್ಸ್ ಥ್ರಿಲ್ ಕೂಡ ಇದೆ. ಮಾಯಾವಿ ಸಿನಿಮಾದ ನಾಯಕರಾಗಿ ಚಿತ್ರದುರ್ಗದ ರಘುರಾಮ್, ನಾಯಕಿಯಾಗಿ ನಿರೀಕ್ಷಣಾಶೆಟ್ಟಿ ಇದ್ದಾರೆ. ಸಂಗೀತ ನಿರ್ದೇಶಕರಾಗಿ ಅಗಸ್ತ್ಯ ಸಂತೋಷ್, ಮಾಡುತ್ತಿದ್ದು, ಎರಡು ಹಾಡುಗಳನ್ನು ಮಾಡಿದೆ. ಒಂದು ಹಾಡನ್ನು ವಿಜಯಪ್ರಕಾಶ್ ಹಾಡಿದ್ದಾರೆ. ಚಿತ್ರದ ಚಿತ್ರೀಕರಣವು ಬಹುತೇಕ ಚಿತ್ರದುರ್ಗದಲ್ಲಿ ನಡೆಯಲಿದೆ. ನಂತರ ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಿದ್ದೇವೆ ಎಂದರು. ಸಿನಿಮಾಟೋಗ್ರಫಿಯನ್ನು ಹಿರಿಯ ನಟ ಮುಸುರಿಕೃಷ್ಣ ಮೂರ್ತಿ ಪುತ್ರ ಗುರುದತ್ ಮುಸುರಿ,ಸಿನಿಮಾದ ನಿರ್ಮಾಪಕರಾಗಿ ಮಹೇಶ್ವರಪ್ಪ ಇದ್ದಾರೆಂದು ತಿಳಿಸಿದರು. ಮಾಯಾವಿ ಚಿತ್ರದ ನಾಯಕನಟ ರಘುರಾಮ್ ಮಾತಾಡಿ, ನಾನು ಮೊದಲ ಬಾರಿಗೆ ನಾಯಕನಟನಾಗಿ ನಟಿಸುತ್ತಿದ್ದು, ಎಲ್ಲರೂ ನನಗೆ ಪ್ರೋತ್ಸಾಹಿಸಿ ಹಾರೈಸಬೇಕು ಎಂದರು. ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಮಾತಾಡಿ, ಕಥೆಗೆ ಹೊಂದಿಕೊಳ್ಳುವಂತ ಸಂಗೀತವನ್ನು ಮಾಡಿದ್ದೇವೆ. ಹಾರರ್ ಮೂವಿಯಾಗಿರುವುದರಿಂದ ಚಿತ್ರಕ್ಕೆ ಹಿನ್ನೆಲೆ ಸಂಗೀತ ಜೋರಾಗಿ ಇರಬೇಕಾಗುತ್ತದೆ. ಇದೆಲ್ಲವನ್ನು ಅರಿತು ಮಾಡಿದ್ದೇವೆ ಎಂದರು.