ಅಡಿಕೆ ಮಾರಿ ತರುತ್ತಿದ್ದ 1.5 ಕೋಟಿ ಹಣವನ್ನು ಕಾರಿನಿಂದ ಅಡ್ಡಗಟ್ಟಿ ದರೋಡೆ ಮಾಡಿ ಪರಾರಿಯಾಗಿದ್ದ ಅಂತರ ಜಿಲ್ಲಾ ದರೋಡೆಕೋರರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ತಾಲೂಕಿನ ಹೊಸಹಳ್ಳಿಯ ಇರ್ಫಾನುಲ್ಲ ತನ್ನ ಸ್ನೇಹಿತ ಜಾಕೀರ್ ನೊಂದಿಗೆ ಹೈದರಾಬಾದ್ ಹೋಗಿ ಅಡಿಕೆ ಮಾರಾಟ ಮಾಡಿ 1.5 ಕೋಟಿ ಹಣದ ಜೊತೆಗೆ ಚಿತ್ರದುರ್ಗಕ್ಕೆ ಬಂದು ಈಚಲನಾಗೇನಹಳ್ಳಿ ಬಳಿ ಹೊಸಹಳ್ಳಿ ಗ್ರಾಮಕ್ಕೆ ಬೈಕ್ ನಲ್ಲಿ ಹೊರಟಾಗ ಖಾದಿ ಗ್ರಾಮೋದ್ಯೋಗ ಕೇಂದ್ರದ ಬಳಿ 4 ಜನ ಬಂದು ಚಾಕು ತೋರಿಸಿ ಭಯಪಡಿಸಿ ಹಲ್ಲೆ ಮಾಡಿ ತಮ್ಮ ಬಳಿಯಿದ್ದ 1.5 ಕೋಟಿ ಹಣವನ್ನು ದರೋಡೆ ಮಾಡಿದ್ದಾರೆ ಎಂದು ಗ್ರಾಮಾಂತರ ಠಾಣೆಯಲ್ಲಿ ಇರ್ಫಾನುಲ್ಲ ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿ,ತಾಂತ್ರಿಕ ಸಾಕ್ಷಾಧಾರಗಳ ಮೇರೆಗೆ 10 ಜನ ಅಂತರ ಜಿಲ್ಲಾ ದರೋಡೆಕೋರರನ್ನು ಬಂಧಿಸಿದ್ದಾರೆ.
ಬಂಧಿತರನ್ನು ದಾವಣಗೆರೆಯ ಶಶಿಕಿರಣ್,ಮಂಜುನಾಥ್,ಪ್ರತಾಪ್ ಗೌಡ,ಬಿಕೆ ಲಿಂಗರಾಜ್,ಕಿರಣ್, ಚಿತ್ರದುರ್ಗದ ಮಹಮ್ಮದ್ ಶಫೀವುಲ್ಲಾ, ಮತ್ತು ಬೆಂಗಳೂರಿನ ನವೀನ ಹೆಚ್.ಹುಸೇನ್ ಭಾಷಾ ಮತ್ತು ಶ್ರೀನಿವಾಸ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ 63 ಲಕ್ಷದ 25 ಸಾವಿರ ನಗದು ಹಣ, ದರೋಡೆ ಮಾಡಿದ ಹಣ 9 ಲಕ್ಷ ಮೌಲ್ಯದ ಕಾರು, 1.32 ಲಕ್ಷ ಮೌಲ್ಯದ ಕೆಟಿಎಂ ಬೈಕ್, ಕೃತ್ಯಕ್ಕೆ ಬಳಸಿದ ಒಂದು ಇಂಡಿಕಾ ಕಾರು, ಮೂರು ಬೈಕ್ ಗಳು, ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಈ ಕಾರ್ಯವನ್ನು ಎಸ್ಪಿ ಡಾ. ಧರ್ಮೇಂದ್ರ ಕುಮಾರ್ ಮೀನಾ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.





