ಅಂತರ ಜಿಲ್ಲಾ ಕಳ್ಳನನ್ನು ಬಂಧಿಸಿರುವ ಚಳ್ಳಕೆರೆ ಪೊಲೀಸರು ಅವನಿಂದ 20 ಲಕ್ಷದ 50 ಸಾವಿರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಚಳ್ಳಕೆರೆ ಯ ತಿಪ್ಪೇಸ್ವಾಮಿ ಆಲಿಯಾಸ್ ಮೊಬೈಲ್ ತಿಪ್ಪೇಶಿ ಎಂದು ಗುರುತಿಸಲಾಗಿದ್ದು, ಈತನನ್ನು ಇಮಾಂಪುರ ಗೇಟ್ ಬಳಿ ಹಾದು ಹೋಗುವ ಫಾರೆಸ್ಟ್ ನಲ್ಲಿ ಹಿಡಿದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸ್ವತ್ತು ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢ ಪಟ್ಟಿದೆ. ಈತನ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ 3 ಕಳವು ಪ್ರಕರಣ, ಪರುಶುರಾಂಪುರ ವ್ಯಾಪ್ತಿಯಲ್ಲಿ ಒಂದು ಸುಲಿಗೆ ಪ್ರಕರಣ, ದಾವಣಗೆರೆ ರೈಲ್ವೇ ಠಾಣೆ ವ್ಯಾಪ್ತಿಯಲ್ಲಿ 2, ಶಿವಮೊಗ್ಗ 3 ಹಾಗೂ ಅರಸಿಕೆರೆ 1 ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕೂಡ ಪತ್ತೆಯಾಗಿದೆ. ಈತನನ್ನು ವಶಕ್ಕೆ ಪಡೆದ ಪೊಲೀಸರು ಚಳ್ಳಕೆರೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಂದ ಒಂದು ಮಾಂಗಲ್ಯ ಸರವನ್ನು ಅಮಾನತ್ತು ಪಡಿಸಿಕೊಂಡು, ಕೋರ್ಟ್ ಗೆ ಹಾಜರು ಪಡಿಸಿದ ನಂತರ ಮತ್ತೆ ಆತನನ್ನು ನ್ಯಾಯಾಲಯದಿಂದ ವಿಚಾರಣೆಗೆಂದು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಿ 10 ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ 360 ಗ್ರಾಂ ತೂಕದ 2 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ಮತ್ತು 652 ಗ್ರಾಂ ತೂಕದ 55 ಸಾವಿರ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಈಕಾರ್ಯವನ್ನು ಎಸ್ಪಿ ಕೆ.ಪರುಶುರಾಂ ಶ್ಲಾಘಿಸಿದ್ದಾರೆ.





