ಮುಂದಿನ ದಿನದಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದರೊಂದಿಗೆ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕಿದೆ ಎಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ ರವೀಶ್ ಕುಮಾರ್ ತಿಳಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮುದ್ದಾಪುರ ಗ್ರಾಮ ಪಂಚಾಯಿತಿ ಹಿರೇಕಬ್ಬಿಗೇರೆ ಗ್ರಾಮದ ಸುತ್ತಾ-ಮುತ್ತಲಿನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಿರೇಕಬ್ಬಿಗೇರೆ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ವಿವಿಧ ರೀತಿಯ ಯೋಜನೆ ಹಾಗೂ ಸಾಲ ಮನ್ನಾ ಕಾರ್ಯಕ್ರಮಗಳು ನಮ್ಮ ಚುನಾವಣೆಗೆ ಶ್ರೀರಕ್ಷೆಯಾಗಲಿದೆ ಎಂದರು.
ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಉತ್ತಮವಾದ ಆಡಳಿತವನ್ನು ರಾಜ್ಯದ ಜನತೆಗೆ ನೀಡಿದ್ದಾರೆ, ಇವರ ಆಡಳಿತದಲ್ಲಿ ಜನತೆ ನೆಮ್ಮದಿಯಾಗಿ ಇದ್ದರು ಎಂದು ಈಗಲೂ ಸಹಾ ಗ್ರಾಮಾಂತರ ಪ್ರದೇಶದಲ್ಲಿ ನಾವು ಹೋದಾಗ ಎಲ್ಲಾ ಮತದಾರರು ಹೇಳುತ್ತಾರೆ. ಈ ಒಂದು ಮಾತು ನಮಗೆ ಸಂತಸವನ್ನು ತಂದಿದೆ. ಮುಂದಿನ ದಿನದಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವುದರೊಂದಿಗೆ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಕಾರ್ಯವನ್ನು ಮಾಡಬೇಕಿದೆ. ಈಗ ಇರುವ ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು ಜೆಡಿಎಸ್ ಪಕ್ಷದವರೇ ಆಗಿದ್ದಾರೆ ಇಲ್ಲಿಂದ ಹೋದವರೆ ಅಲ್ಲಿ ನಾಯಕರಾಗಿದ್ದಾರೆ. ಮುಂದಿನ ದಿನದಲ್ಲಿ ಜೆಡಿಎಸ್‌ನ ಪಂಚರತ್ನ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಸಂಚಾರ ಮಾಡಲಿದೆ ಆಗ ಹೆಚ್ಚಿನ ಮಟ್ಟದಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಆಗಮಿಸುವುದರ ಮೂಲಕ ಕುಮಾರಸ್ವಾಮಿಯವರ ಕೈಯನ್ನು ಬಲ ಪಡಿಸಬೇಕಿದೆ ಎಂದು ತಿಳಿಸಿದರು.
ಚಳ್ಳಕೆರೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಿ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಈ ಭಾಗದಲ್ಲಿ ಬೇರೆ ಪಕ್ಷದಿಂದ ಸೇರ್ಪಡೆಯಾಗಿದ್ದರಿಂದ ಪಕ್ಷಕ್ಕೆ ಮತ್ತಷ್ಠು ಬಲ ಬಂದಿದೆ. ಈ ಬಾರಿ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮತಗಳು ಬರುವಂತೆ ಮಾಡಬೇಕಿದೆ. ಇದಕ್ಕೆ ಪಕ್ಷದ ಮುಖಂಡರು ಕಾರ್ಯಕರ್ತರು ಈಗಿನಿಂದಲೇ ಸನ್ನದ್ದರಾಗಬೇಕಿದೆ. ಈ ಮುಂಚೆ ಈ ಭಾಗದಲ್ಲಿ ಜೆಡಿಎಸ್‌ಗೆ ಯಾರು ಸಹಾ ಬೆಂಬಲವನ್ನು ನೀಡಿರಲಿಲ್ಲ ಆದರೆ ಈಗ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದೆ, ಕಳೆದ ಭಾರಿ ಚುನಾವಣೆಯಲ್ಲಿ ಸೋತ್ತಿದ್ದರು ಸಹಾ ರವೀಶ್ ರವರು ಎದೆಗುಂದೆ ಧೈರ್ಯದಿಂದ ಮತ್ತೋಮ್ಮೆ ಚುನಾವಣೆಯಲ್ಲಿ ಸ್ಪರ್ದೇಯನ್ನು ಮಾಡುವುದರ ಮೂಲಕ ತಮ್ಮ ಅದೃಷ್ಠವನ್ನು ಒರೆಗೆ ಹಚ್ಚಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಯನಹಳ್ಳಿಯ ಶಶಿಧರ್, ಕಾಂತರಾಜ್, ನಾರಪ್ಪ, ಅಜ್ಜಣ್ಣ, ಓಂಕಾರಪ್ಪ, ಹಿರೇಕಬ್ಬಿಗೆರೆ ಕಾಂತರಾಜ್ ವೇದಿಕೆಯಲ್ಲಿದ್ದರು. ಈ ಸಂದರ್ಭದಲ್ಲಿ ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ, ಸೂರೇನಹಳ್ಳಿ, ಚಿಕ್ಕ ಕಬ್ಬಿಗೆರೆ ಗೊಲ್ಲರಹಟ್ಟಿ, ಮುದ್ದಾಪುರ, ದೂಡ್ಡಘಟ್ಟ, ಬೆಳಗಟ್ಟ, ಪೆಲೂರಹಟ್ಟಿ, ಲಂಬಾಣಿಹಟ್ಟಿಯ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾದರು.





