ಹೊಳಲ್ಕೆರೆ : ಸರ್ಕಾರದಲ್ಲಿ ಹಣ ತಂದು ಅಭಿವೃದ್ದಿ ಕೆಲಸ ಮಾಡುವ ಯೋಗ್ಯತೆ ಜನಪ್ರತಿನಿಧಿಗಿರಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.
ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಾರ್ಯಾಲಯ ಉದ್ಗಾಟಿಸಿ ಮಾತನಾಡಿದರು.
31 ವರ್ಷಗಳ ಹಿಂದೆ ಭರಮಸಾಗರ ಕ್ಷೇತ್ರದಿಂದ ಸ್ಪರ್ಧಿಸಿ ನಾನು ಎಂ.ಎಲ್.ಎ. ಆದವನು. ಅಂದಿನಿಂದ ಇಂದಿನವರೆಗೂ ಜನಸೇವೆಯಲ್ಲಿ ತೊಡಗಿದ್ದೇನೆ. ಓಟ್ ಹಾಕಿ ನನ್ನನ್ನು ಗೆಲ್ಲಿಸಿದ್ದೀರ. ನಿಮ್ಮಗಳ ಋಣ ತೀರಿಸುವ ಬದ್ದತೆ, ಜವಾಬ್ದಾರಿ ನನ್ನ ಮೇಲಿದೆ. ಹಿರಿಯೂರಿನ ವಾಣಿವಿಲಾಸಸಾಗರದಿಂದ ನೀರು ತಂದು ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರು ಪೂರೈಸುವುದಕ್ಕಾಗಿ 367 ಕೋಟಿ ರೂ.ಗಳನ್ನು ಖರ್ಚು ಮಾಡಿದ್ದೇನೆ. ಡಿಸೆಂಬರ್ ಇಲ್ಲ ಜನವರಿ ತಿಂಗಳೊಳಗೆ ನೀರು ಪೂರೈಸಲಾಗುವುದು. ಭದ್ರಾಜಲಾಶಯಕ್ಕೆ ಬಾಗಿನ ಅರ್ಪಿಸಿ ಬಂದಿದ್ದೇನೆ. ಇನ್ನು ಮೂರು ತಿಂಗಳೊಳಗೆ ತಾಲ್ಲೂಕಿನ ಎಲ್ಲಾ 37 ಕೆರೆಗಳಲ್ಲಿ ನೀರು ತುಂಬಲಿದೆ. 120 ಮೀಟರ್ ಚಾನಲ್ ಕಾಮಗಾರಿ ಮುಗಿದರೆ ನೀರು ಹರಿಯುತ್ತದೆ. ಆಗ ರೈತರು ನೆಮ್ಮದಿಯಿಂದಿರಬಹುದೆಂದು ಹೇಳಿದರು.
ತಾಲ್ಲೂಕಿನಾದ್ಯಂತ ಸಿ.ಸಿ.ರಸ್ತೆ, ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ, ಸಮುದಾಯ ಭವನ ನಿರ್ಮಾಣವಾಗಿದೆ. ದೇವಸ್ಥಾನಗಳಿಗೆ ಹಣ ಕೊಟ್ಟಿದ್ದೇನೆ. ಜಗಳೂರು ಗಡಿಯಿಂದ ಶಿವನಿ ಅಜ್ಜಂಪುರದವರೆಗೂ ನನ್ನ ಕ್ಷೇತ್ರ ವ್ಯಾಪ್ತಿಯಿದೆ. ಯಾವ ಊರಿಗೆ ಏನು ಮಾಡಿದರೆ ಒಳ್ಳೆಯದು ಎನ್ನುವ ಆಲೋಚನೆಯಿಟ್ಟುಕೊಂಡು ದಿನನಿತ್ಯವೂ ಒಂದಲ್ಲ ಒಂದು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದೇನೆಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಎಸ್. ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ವಿಶ್ವನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಹೆಚ್.ಸವಿತಾ ಅನಿಲ್‍ಕುಮಾರ್, ಉಪಾಧ್ಯಕ್ಷ ರಾಜಪ್ಪ, ಸದಸ್ಯರುಗಳು ಮತ್ತು ಗ್ರಾಮದ ಮುಖಂಡರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





