ಚಿತ್ರದುರ್ಗ ಜು. 07: ಗಾಣಿಗ ಸಮಾಜದ ತೈಲೇಶ್ವರ ಸ್ವಾಮೀಜಿ ಸಚಿವ ಶಿವರಾಜ್ ತಗಂಡಗಿ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದು, ಅವರು ಕಮಿಷನ್ ಮೇಲೆ ಬದುಕುವಂತ ಜನ ಅಲ್ಲ, ನ್ಯಾಯ ನಿಷ್ಠೆಯಿಂದ ರಾಜಕೀಯ ಜೀವನದಲ್ಲಿ ಇದ್ದಾರೆಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ಸಚಿವರ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕಿದ್ದಾರೆ.
ಚಿತ್ರದುರ್ಗ ನಗರದ ಹೊರ ವಲಯದ ಭೋವಿ ಗುರು ಪೀಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತಾಡಿ,ಶ್ರೀಗಳು ಸಚಿವ ಶಿವರಾಜ್ ತಗಂಡಗಿ ಪ್ರಮಾಣಿಕವಾಗಿ ರಾಜಕೀಯ ನಡೆಸುತ್ತಿದ್ದಾರೆ, ಅವರು ಯಾರಿಂದಲೂ ಹಣ ಪಡೆದಿಲ್ಲ. ರಾಜಕೀಯದಿಂದ ಹಣ ಮಾಡುವ ಉದ್ದೇಶ ಅವರಲ್ಲಿಲ್ಲ. ತಮ್ಮ ಜೀವನದಲ್ಲಿ ಕಾಯಕ ಪ್ರವೃತ್ತಿ ರೂಢಿಸಿಕೊಂಡವರು ತಮ್ಮಲ್ಲಿರುವುದನ್ನು ಬೇರೆಯವರೊಂದಿಗೆ ಹಂಚಿ ಊಟ ಮಾಡುತ್ತಾರೆಂದರು.
ಸರ್ಕಾರದಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಬೇಕಾದರೂ ಅದಕ್ಕೆ ತನ್ನದೆ ನಿಯಮಗಳಿವೆ. ಅದನ್ನು ಪಾಲಿಸಬೇಕಿದೆ, ಸರ್ಕಾರದಿಂದ ಬಿಡುಡಗೆಯಾಗುವ ಅನುದಾನದಲ್ಲಿ 1 ಕೋಟಿಗಿಂತ ಕಡಿಮೆ ಇದ್ದರೆ ಸಚಿವರೇ ಬಿಡುಗಡೆ ಮಾಡುತ್ತಾರೆ. ಆದರೆ 1 ಕೋಟಿಗಿಂತ ಹೆಚ್ಚಾದರೆ ಅ ಕಡತ ಮುಖ್ಯಮಂತ್ರಿ ಬಳಿ ಹೋಗುತ್ತದೆ. ಅವರು ಪರಿಶೀಲಿಸಿದ ನಂತರ ಹಣಕಾಸು ಇಲಾಖೆಗೆ ಬಂದು ಅಲ್ಲಿ ಅನುಮೋದನೆ ಪಡೆದ ನಂತರ ಹಣ ಬಿಡುಗಡೆಯಾಗುತ್ತದೆ.ಗಾಣಿಗ ಸಮುದಾಯದಲ್ಲಿ ಸ್ವಾಮಿಜೀ ಗಳಾದವರು ತಮ್ಮ ಪೂರ್ವಾಶ್ರಮದಲ್ಲಿ ರಾಜಕೀಯದಲ್ಲಿ ಇದ್ದವರು, ಹಾಗೂ ಸಚಿವರಾಗಿ ಅನುಭವ ಹೊಂದಿದ್ದಾರೆ. ಅವರಿಗೆ ಸರ್ಕಾರದಿಂದ ಯಾವ ರೀತಿ ಹಣ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ಇದೆ ಎಂದ ಶ್ರೀಗಳು ಒಂದು ಸರ್ಕಾರ ಯಾವುದಕ್ಕಾದರೂ ಅನುದಾನ ನೀಡುತ್ತೇವೆ ಎಂದು ತಿಳಿಸಿ, ಆ ಸರ್ಕಾರ ಹೋದರೆ ಹೊಸ ಸರ್ಕಾರದಲ್ಲಿ ಹಿಂದಿನ ಸರ್ಕಾರದ ಅನುದಾನ ಬಿಡುಗಡೆಯಾಗುವುದು ಕಷ್ಠದ ಕೆಲಸವಾಗಿದೆ ಎಂದು ತಮ್ಮ ಅನುಭವ ತಿಳಿಸಿದರು.
ತಗಂಡಗಿ ಕಟ್ಟ ಕಡೆಯ ಸಮುದಾಯಕ್ಕೂ ಸರ್ಕಾರದ ಸೌಲಭ್ಯ ಸಿಗಬೇಕು ಎನ್ನುವವರಾಗಿದ್ದಾರೆ. ಈ ರೀತಿ ಕಮಿಷನ್ ಆಸೆ ಹೊಂದಿಲ್ಲ, ಪ್ರತಿ ಸಮುದಾಯದ ಹಿತ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಗಾಣಿಗ ಸಮಾಜದ ತೈಲೇಶ್ವರ ಸ್ವಾಮೀಜಿ ಮಾಡಿರುವ ಆರೋಪ ಆಧಾರ ರಹಿತ ಆರೋಪವಾಗಿದೆ. ಯಾವುದೇ ಒಂದು ಆರೋಪವನ್ನು ಮಾಡಬೇಕಾದರೆ ಅದಕ್ಕೆ ತಕ್ಕ ಸಾಕ್ಷಿಗಳು ಆಧಾರಗಳು ಆಗತ್ಯವಾಗಿದೆ. ಸಚಿವರು ಕಮಿಷನ್ ಕೇಳಿದ್ದಕ್ಕೆ ಏನಾದರೂ ಸಾಕ್ಷಿ ಇದ್ದೆಯೇ ಎಂದು ಪ್ರಶ್ನಿಸಿದ ಶ್ರೀಗಳು, ನಿಮ್ಮ ಸಮುದಾಯಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಮಠ ಅಭಿವೃದ್ದಿ ಮಾಡಿ ಹಾಗೆಯೇ ಸಮುದಾಯದ ಅಭಿವೃದ್ದಿ ಮಾಡಿ,ಆದರೆ ವಿನಾಕಾರಣ ಸ್ವಚ್ಚ ರಾಜಕಾರಣಿ ವಿರುದ್ಧ ಈ ರೀತಿ ಆರೋಪ ಸರಿಯಲ್ಲ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು ತಿಳಿಸಿದರು.
ಗೋಷ್ಟಿಯಲ್ಲಿ ಸಿಇಓ ಗೌನಳ್ಳಿ ಗೋವಿಂದಪ್ಪ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ್, ಎಸ್.ಜೆ.ಎಸ್ ಸಂಸ್ಥೆ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ಕಾಳಘಟ್ಟದ ಹನುಮಂತಪ್ಪ, ಚಳ್ಳಕೆರೆ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷರಾದ ಹೆಚ್.ಅಂಜನೇಯ, ನಿರ್ದೇಶಕರಾದ ಈರಣ್ಣ ಭಾಗವಹಿಸಿದ್ದರು.



