ಚಿತ್ತಾಕರ್ಷಕ ಹೂಗಳು, ಸ್ವಾವಲಂಬಿ ರೈತ ಕಲಾಕೃತಿಗಳಿಗೆ ಶಾಸಕ ರಘುಮೂರ್ತಿ ಪ್ರಶಂಸೆ
ಚಿತ್ರದುರ್ಗ ,ಫೆ.17: ಚಿತ್ರದುರ್ಗ ನಗರದ ವಿ.ಪಿ. ಬಡಾವಣೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಇಲಾಖೆ ಆವರಣದಲ್ಲಿ ಇದೇ ನಡೆಯುತ್ತಿರುವ ಫಲ-ಪುಷ್ಪ ಪ್ರದರ್ಶನಕ್ಕೆ ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ. ರಘುಮೂರ್ತಿ ಅವರು ಭೇಟಿ ನೀಡಿ ವೀಕ್ಷಿಸಿ, ಫಲ ಪುಷ್ಪ ಪ್ರದರ್ಶನದಲ್ಲಿ ವೈವಿಧ್ಯತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಫಲ ಪುಷ್ಪ ಪ್ರದರ್ಶನದಲ್ಲಿ ಹೆಣ್ಣಿಗೆ ಗೌರವ ಸೂಚಕ ಕಲಾಕೃತಿ, ಮಯೂರವರ್ಮ, ಸ್ವಾವಲಂಬಿ ರೈತ ಹಾಗೂ ವಾಣಿವಿಲಾಸ ಸಾಗರ ಕಲಾಕೃತಿ ಅತ್ಯುತ್ತಮವಾಗಿ ಮೂಡಿ ಬಂದಿವೆ ಎಂದ ಶಾಸಕರು, ಇಂತಹ ಫಲ ಪುಷ್ಪ ಪ್ರದರ್ಶನಗಳು ರೈತರಿಗೆ ಪ್ರೇರಣೆ ನೀಡುತ್ತವೆ. ಜಿಲ್ಲೆಯ ವಿವಿಧ ಇಲಾಖೆಗಳಿಂದ ತಮ್ಮ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದರಿಂದ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿ ರೈತರಿಗೆ ಹಾಗೂ ಆಸಕ್ತ ಸಾರ್ವಜನಿಕರಿಗೆ ದೊರೆಯುತ್ತದೆ ಹಾಗೂ ತೋಟಗಾರಿಕೆ ವಿಸ್ತರಣೆಗೂ ಉತ್ತೇಜನ ನೀಡುತ್ತವೆ. ಫಲ ಪುಷ್ಪ ಪ್ರದರ್ಶನದಲ್ಲಿ ರೈತರಿಗೆ ತೋಟಗಾರಿಕೆಗೆ ಸಂಬಂಧಿಸಿದಂತೆ ವಿವಿಧ ಬಗೆಯ ಹಣ್ಣು, ಹೂಗಳ ತಳಿಗಳು, ತೋಟಗಾರಿಕೆ ಉಪಯೋಗಿ ಮಾಹಿತಿ ಲಭ್ಯವಾಗುವುದರಿಂದ, ರೈತರು ತಮ್ಮ ಹೊಲಗಳಲ್ಲಿ ಇವುಗಳನ್ನು ಅಳವಡಿಸಿಕೊಂಡು, ಆರ್ಥಿಕ ಸಬಲತೆ ಜೊತೆಗೆ ಸ್ವಾವಲಂಬಿಗಳಾಗಬಹುದು ಎಂದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ. ಸವಿತಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಫಲ-ಪುಷ್ಪ ಪ್ರದರ್ಶನದ ಕುರಿತು ಸಮಗ್ರ ಮಾಹಿತಿ ನೀಡಿದರು.