ಇದೇ ಸೆ. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಯಲ್ಲಿ, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಹಿರಿಯೂರಿ ತಾಲೂಕುಗಳಲ್ಲಿ ಮಾನವ ಸರಪಳಿ ನಿರ್ಮಾಣ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು. ಅವರು ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡುತ್ತಾ, ಬೀದರ್ ನಿಂದ ಚಾಮರಾಜ ನಗರದವರೆಗೂ ಮಾನವ ಸರಪಳಿ ನಿರ್ಮಿಸಲಾಗುತ್ತದೆ. ನಾವು ಮೊಳಕಾಲ್ಮೂರಿನ ಕಣಿವೆ ಹಳ್ಳಿಯಿಂದ ಹಿರಿಯೂರಿನ ಜವನಗೊಂಡನಹಳ್ಳಿಯವರೆಗೆ 1ಲಕ್ಷದ 20 ಸಾವಿರ ಜನರ ಬಳಸಿ ಹೈವೇಯುದ್ದಕ್ಕೂ ಮಾನವ ಸರಪಳಿ ನಿರ್ಮಿಸಲು ಸಿದ್ದತೆ ಮಾಡಿಕೊಂಡಿದ್ದೇವೆ. ಹೈವೆಯ ಒಂದು ಬದಿಯನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಮಾನವ ಸರಪಳಿಯಲ್ಲಿ ಒಂದು ಕಿಲೋಮೀಟರ್ ಗೆ 800 ಜನರಂತೆ ಬೇಕಾಗುತ್ತದೆ. ಇದರಿಂದ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಶಾಲಾ ಕಾಲೇಜ್ ಗಳಿಗೂ ಭಾಗವಹಿಸಲು ಮನವಿಯನ್ನು ಮಾಡಿದ್ದೇವೆ. ಬಸ್ ನ ವ್ಯವಸ್ಥೆ ಯನ್ನು ಮಾಡಿದ್ದು, ವಿದ್ಯಾರ್ಥಿಗಳನ್ನು ಕರೆದು ತಂದು ಮತ್ತೆ ವಾಪಸ್ಸು ಸುರಕ್ಷಿತವಾಗಿ ಬಿಡಲಾಗುತ್ತದೆ. ಇದರ ಜೊತೆಗೆ ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲೂಕುಗಳಿಂದಲೂ ನಾಗರೀಕರು ಹಾಗೂ ಸಂಘ ಸಂಸ್ಥೆಗಳು ಶಾಲಾ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಲು ತಿಳಿಸಿದ್ದೇವೆ ಎಂದರು. ಈ ಸಮಯದಲ್ಲಿ ಅಪರ ಜಿಲ್ಲಾಧಿಕಾರಿ ಬಿ ಟಿ ಕುಮಾರಸ್ವಾಮಿ, ಸಮಾಜ ಕಲ್ಯಾಣ ಉಪನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಇದ್ದರು.





