ನಾಯಕನಹಟ್ಟಿ ಜಾತ್ರೆ: ವಸ್ತು ಪ್ರದರ್ಶನ ಕಾರ್ಯಕ್ರಮ ವ್ಯವಸ್ಥಿತವಾಗಿರಲಿ
ಚಳ್ಳಕೆರೆ ತಾಲ್ಲೂಕಿನ ನಾಯಕನಟ್ಟಿಯ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಇಲಾಖೆಯ ವಸ್ತು ಪ್ರದರ್ಶನ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಹೇಳಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯ ಅಂಗವಾಗಿ ವಸ್ತು ಪ್ರದರ್ಶನ ಕಾರ್ಯಕ್ರಮ ನೆರವೇರಿಸುವ ನೆರವೇರಿಸುವ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆಯು ಇದೇ ಮಾರ್ಚ್ 19 ರಿಂದ ಏಪ್ರಿಲ್ 1 ರವರೆಗೆ ನಡೆಯಲಿದ್ದು, ದೊಡ್ಡ ರಥೋತ್ಸವ ಮಾರ್ಚ್ 26ರಂದು ನಡೆಯಲಿದೆ. ಜಾತ್ರೆಯ ಅಂಗವಾಗಿ ವಿವಿಧ ಇಲಾಖೆಗಳು ವಸ್ತು ಪ್ರದರ್ಶನ ಏರ್ಪಡಿಸಬೇಕು, ಆರೋಗ್ಯ ಇಲಾಖೆಯವರು ಸ್ವಚ್ಛತೆ ಹಾಗೂ ಬೇಸಿಗೆಯಲ್ಲಿ ಕಂಡುಬರುವ ರೋಗಗಳ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜಕರಿಗೆ ಮಾಹಿತಿ ಶಿಕ್ಷಣ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿಯವರು ಸ್ವ ಸಹಾಯ ಗುಂಪಿನ ಮಹಿಳೆಯರಿಂದ ತಯಾರಿತ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ತೆರೆಯಬೇಕು ಎಂದು ಹೇಳಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಗೆ ಬರುವುದರಿಂದ ವಸ್ತು ಪ್ರದರ್ಶನದಲ್ಲಿ ಯಾವುದೇ ಜನಪ್ರತಿನಿಧಿಗಳ ಭಾವಚಿತ್ರವನ್ನು ಹಾಕಬಾರದು ಹಾಗೂ ನೀತಿ ಸಂಹಿತೆಯ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಕಾಶೀ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಚೌಧರಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಜಿಲ್ಲಾ ಕೈಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.





