ಆಗ್ನೇಯ ಶಿಕ್ಷಕರ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಡಿಟಿ ಶ್ರೀನಿವಾಸ್ ಅವರಿಗೆ ಗೆಲ್ಲಲು ಉತ್ತಮ ಅವಕಾಶವಿದೆ ಅವರು ಗೆಲ್ಲುತ್ತಾರೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ನೇರಲಗುಂಟೆ ಎಂ. ರಾಮಪ್ಪ ಭವಿಷ್ಯ ನುಡಿದರು.
ಅವರು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಡಿಟಿ ಶ್ರೀನಿವಾಸ್ ಮತ್ತು ಪೂರ್ಣಿಮಾ ಶ್ರೀನಿವಾಸ್ ಅವರ ಭೇಟಿ ಕಾರ್ಯಕ್ರಮದಲ್ಲಿ ಮಾತಾಡಿದರು. ಈಗಾಗಲೇ ಶ್ರೀನಿವಾಸ್ ಅವರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಅವರಿಗೆ ಕ್ಷೇತ್ರದ ಪರಿಚಯವಿದೆ. 2018 ರಲ್ಲಿ ನಾನು ಸ್ಪರ್ಧೆ ಮಾಡಿದಾಗ ಸಮ್ಮಿಶ್ರ ಸರ್ಕಾರವಿತ್ತು. ಇದೇ ಸಮಯದಲ್ಲಿ ಚುನಾವಣೆ ಬಂದಿದ್ದು, ಕೇವಲ ಒಂದು ತಿಂಗಳು ಮಾತ್ರ ನನಗೆ ಸಮಯಾವಕಾಶವಿತ್ತು. ಆದರೆ ಶ್ರೀನಿವಾಸ್ ಅವರಿಗೆ ಏಳು ತಿಂಗಳ ಮುಂಚೆಯೇ ಬಿಫಾರಂ ಘೋಷಣೆ ಮಾಡಿದ್ದಾರೆ. ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳು ಬಿಟ್ಟರೆ ಉಳಿದ ಎಲ್ಲೆಡೆ ಬಿ ಫಾರಂ ಘೋಷಣೆಯಾಗಿದೆ. ಇದರಿಂದ ಚುನಾವಣೆಯ ಕೆಲಸ ಮಾಡಲುಬಹಳ ಸುಲಭವಿದೆ. ಈ ಸಮಯದಲ್ಲಿ ಮತದಾರರ ತಲುಪಬೇಕು. ಈಗಾಗಲೇ ಶ್ರೀನಿವಾಸ್ ಅವರಿಗೆ ನೆಟ್ವರ್ಕ್ ಇದೆ.ಇದರ ಜೊತೆಗೆ ಶಿಕ್ಷಕರ ಸಂಪರ್ಕ ಮಾಡಬೇಕು. ಇದರಿಂದ ಶ್ರೀನಿವಾಸ್ ಅವರಿಗೆ ಉತ್ತಮ ಅವಕಾಶವಿದ್ದು, ಅವರು ಗೆಲ್ಲಬಹುದು ಎಂದರು. ಆದರೆ ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿರುವ ವ್ಯಕ್ತಿ ಜನರನ್ನುಮರಳು ಮಾಡುವಲ್ಲಿ ಬಹಳಷ್ಟು ನಿಪುಣರಾಗಿದ್ದಾರೆ. ರಾತ್ರೋ ರಾತ್ರಿ ಶಿಕ್ಷಕರನ್ನು ದೋಚುತ್ತಾರೆ. ಆದ್ದರಿಂದ ಈ ಬಾರಿ ಶಿಕ್ಷಕರನ್ನು ದೋಚಲು ಬಿಡಬೇಡಿ, ಸರ್ಕಾರ ನಮ್ಮದೆ ಇದೆ. ಇದನ್ನು ಬಳಸಿಕೊಂಡು ಗೆಲುವು ಸಾಧಿಸಬೇಕು. ನಾವೆಲ್ಲರೂ ನಿಮ್ಮ ಜೊತೆಗಿರುತ್ತೇವೆ ಎಂದು ಹೇಳಿದರು.





