ಕೊನೆಯ ಕ್ಷಣದವರೆಗೂ ಮೈ ಮರೆಯದಿರಿ: ಕಾಂಗ್ರೆಸ್ ಹೈ ಕಮಾಂಡ್ ಸೂಚನೆ
ಬೆಂಗಳೂರು; ಹಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪರವಾದ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಮೈ ಮರೆಯದಂತೆ ಕಾಂಗ್ರೆಸ್ ಹೈಕಮಾಂಡ್ ತನ್ನ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಿದೆ.
ಈಗಾಗಲೇ ಗೆದ್ದಿದ್ದೇವೆ ಎಂಬ ಅತಿಯಾದ ವಿಶ್ವಾಸದಲ್ಲಿ ಕೆಲವು ಅಭ್ಯರ್ಥಿಗಳು ಪ್ರಚಾರದ ಬಿರುಸನ್ನು ಕಡಿಮೆ ಮಾಡುತ್ತಿದ್ದಾರೆ ಎಂಬ ಅಸಮಧಾನಗಳು ವ್ಯಕ್ತವಾಗಿವೆ.
ಕಾರ್ಯಕರ್ತರು ಹಗಲು-ರಾತ್ರಿ ಎನ್ನದೆ ಚುನಾವಣಾ ಕಣದಲ್ಲಿ ಬೆವರು ಹರಿಸುತ್ತಿದ್ದರೆ, ಅಭ್ಯರ್ಥಿಗಳು ಉಡಾಫೆ ಪ್ರವೃತ್ತಿಗೆ ಜಾರಿದ್ದಾರೆ ಎಂಬ ಮಾಹಿತಿಗಳಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಎಐಸಿಸಿಯ ಮತ್ತಷ್ಟು ಪ್ರಧಾನಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳನ್ನು ಚುನಾವಣಾ ಉಸ್ತುವಾರಿಗೆ ನಿಯೋಜನೆ ಮಾಡಿದೆ.
ಯಾವುದೇ ಹಂತದಲ್ಲೂ ರಣಕಣದಿಂದ ಹಿಂದೇಟು ಹಾಕಬಾರದು. ಇದು ಸಾಮಾನ್ಯವಾಗಿ ಪರಿಗಣಿಸಬಹುದಾದ ಚುನಾವಣೆ ಅಲ್ಲ. ಕಾಂಗ್ರೆಸ್ ಪಾಲಿಗೆ ಮಾಡು ಇಲ್ಲವೇ, ಮಡಿ ಮಾದರಿಯ ಹೋರಾಟವಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯ ಗೆಲುವು ಕೂಡ ಬಹಳ ಮುಖ್ಯವಾಗಿದೆ.ಯಾರು ಮೈ ಮರೆಯಬಾರದು ಎಂಬ ಸಂದೇಶ ರವಾನೆ ಮಾಡಲಾಗಿದೆ.
ಕಾರ್ಯಕರ್ತರಂತೆ ಪ್ರಮುಖ ನಾಯಕರು ಕೂಡ ನಿರಂತರವಾಗಿ ರಾಜ್ಯ ಪ್ರವಾಸ ಮಾಡುತ್ತಾ ಮತದಾರರ ಮನ ಗೆಲ್ಲಲು ಯತ್ನಿಸುತ್ತಿದ್ದಾರೆ. ವೇದಿಕೆ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿಗಳು ಮನೆ ಮನೆ ತಲುಪುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬಿಜೆಪಿ ಪ್ರಭಾವಿ ನಾಯಕರು ತಮ್ಮ ಗೆಲುವು ಖಚಿತ ಎಂಬ ಭರವಸೆ ಇದ್ದರೂ ಅದನ್ನೂ ಮೀರಿ ಮತದಾರರ ಮನೆ ಬಾಗಿಲು ತಲುಪಲು ಹರ ಸಾಹಸ ಪಡುತ್ತಿದ್ದಾರೆ. ಅಬ್ಬರದ ಪ್ರಚಾರದಿಂದ ದೂರ ಉಳಿದಿದ್ದಾರೆ, ಆ ರಣತಂತ್ರವನ್ನು ಗಮನಿಸಿ ಮುಂದಿನ ಹೋರಾಟ ನಡೆಸುವಂತೆ ಕಾಂಗ್ರೆಸ್ ವರಿಷ್ಠರು ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್‍ನಲ್ಲಿ ಸ್ಟಾರ್ ಪ್ರಚಾರಕರು ಬಂದಾಗ ಅಬ್ಬರದ ಪ್ರಚಾರ ಇರಬೇಕು, ಉಳಿದಂತೆ ಮೈಮರೆಯದೆ ಮನೆ ಮನೆಗೆ ತೆರಳಿ ಮನವೋಲಿಕೆ ಮಾಡಬೇಕು. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದನ್ನು ಆದ್ಯv ಮಾಡಿಕೊಳ್ಳಬೇಕು ಎಂದು ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.
ಮತದಾರರ ಮನೆ ಮನೆ ಬಾಗಿಲಿಗೆ ತಲುವುದನ್ನು ತೀವ್ರಗೊಳಿಸಲು ಎಐಸಿಸಿ ವೀಕ್ಷಕರು ಒತ್ತು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ 150 ಸ್ಥಾನ ಗೆಲ್ಲುವುದು ಅನಿವಾರ್ಯವಾಗಿದೆ. ಇಲ್ಲಿಂದಲೇ ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿ ನಿಗದಿ ಮಾಡಬೇಕಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಹೋರಾಟ ಮತ್ತಷ್ಟು ದೃಢವಾಗಿ ನಡೆಬೇಕು ಎಂಬ ಸಂದೇಶ ರವಾನಿಸಿರುವುದಾಗಿ ಮೂಲಗಳು ತಿಳಿಸಿವೆ.





