ಚಾಕು ತೋರಿಸಿ ಬೆದರಿಸಿ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರಲ್ಲಿ ಓರ್ವನನ್ನು ಹೊಸದುರ್ಗ ಶ್ರೀರಾಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಸರಗಳ್ಳತನ ಮಾಡಿದ್ದ, 2ಲಕ್ಷದ 72 ಸಾವಿರ ಮೌಲ್ಯದ 47 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ. ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ತನಿಖೆ ಮತ್ತು ಶೋಧ ಕಾರ್ಯ ಮುಂದುವರೆದಿದೆ. ಕಳೆದ ಒಂದು ವಾರದ ಹಿಂದೆ ಹೊಸದುರ್ಗದ ಬನ್ನಿಕೆರೆ ಮತ್ತು ಕುರುಬರಹಳ್ಳಿ ನಡುವೆ ಭಾರತಿ ಎನ್ನುವವರನ್ನು ಅಡ್ಡಗಟ್ಟಿ ಮಾಂಗಲ್ಯ ಸರ ದೋಚಿ ಪರಾರಿಯಾಗಿದ್ದರು. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ್ದ ಪೊಲೀಸರು ತುಮಕೂರು ಜಿಲ್ಲೆಯ ಪ್ರದೀಪನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಚಿದಾನಂದನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.