ಒಳಮೀಸಲಾತಿ ವರದಿ ಸರ್ಕಾರಕ್ಕೆ ಶೀಘ್ರ ಸಲ್ಲಿಸಿ:ಮಾಜಿ ಸಚಿವ ಆಂಜನೇಯ ನೇತೃತ್ವದ ನಿಯೋಗ ಮನವಿ
ಬೆಂಗಳೂರು, ಜು.6:ಪರಿಶಿಷ್ಟ ಜಾತಿಗೆ ಸೀಮಿತಗೊಳಿಸಿ ನಡೆಸಿರುವ ಜಾತಿಗಣತಿ ಸಮೀಕ್ಷೆ ವರದಿಯನ್ನು ಶೀಘ್ರ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಮಾದಿಗ ಮುಖಂಡರು ಮನವಿ ಮಾಡಿದರು.
ಬೆಂಗಳೂರಿನಲ್ಲಿ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗದ ಕಚೇರಿಗೆ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ ಮಾದಿಗ ಮುಖಂಡರ ನಿಯೋಗ ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.ರಾಜ್ಯದಲ್ಲಿ ಮಾದಿಗ ಮತ್ತು ಛಲವಾದಿ ಸಮುದಾಯ ಎಕೆ, ಎಡಿ, ಆದಿಆಂಧ್ರ ಹೆಸರಿನಲ್ಲಿ ಗುರುತಿಸಿಕೊಂಡು ಗೊಂದಲದ ಕಾರಣ ಒಳಮೀಸಲಾತಿ ಜಾರಿಗೆ ತಾಂತ್ರಿಕ ಅಡಚಣೆ ಆಗಿತ್ತು.ಈ ನಿಟ್ಟಿನಲ್ಲಿ ಎಸ್ಸಿಯಲ್ಲಿನ ಎಲ್ಲ ಜಾತಿಗಳ ಮೂಲ ಜಾತಿ ಜೊತೆಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಿಂದುಳಿಯುವಿಕೆ ಗುರುತಿಸಲು ರಾಜ್ಯ ಸರ್ಕಾರ ತಮ್ಮ ನೇತೃತ್ವದಲ್ಲಿ ನಡೆಸಿದ ಜಾತಿಗಣತಿ ಸಮೀಕ್ಷೆ ಕಾರ್ಯ ಯಶಸ್ವಿಗೊಂಡಿದ್ದು, ದೇಶಕ್ಕೆ ಮಾದರಿ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಮೇ 5ರಂದು ಆರಂಭಗೊಂಡ ಸಮೀಕ್ಷೆ ಕಾರ್ಯ ರಾಜ್ಯಾದ್ಯಂತ ಜೂನ್ 30 ಹಾಗೂ ಬೆಂಗಳೂರು ಮಹಾನಗರ ಪಾಲಿಕೆಗೆ ಸೀಮಿತಗೊಳಿಸಿ ಜುಲೈ 6ರ ವರೆಗೆ ನಡೆಸಲಾಗಿದೆ. ಈ ಮೂಲಕ ಜಾತಿಗಣತಿ ಸಮೀಕ್ಷೆ ಕಾರ್ಯದಲ್ಲಿ ನೋಂದಣಿ ಮಾಡಿಕೊಳ್ಳಲು ಬಹಳಷ್ಟು ಅವಕಾಶವನ್ನು ಆಯೋಗ ಕಲ್ಪಿಸಿದೆ. ಈಗ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ತಕ್ಷಣ ಆಯೋಗ ದತ್ತಾಂಶದ ಸಮಗ್ರ ವರದಿಯನ್ನು ಶೀಘ್ರ ರಾಜ್ಯ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಪರಿಶಿಷ್ಟ ಜಾತಿಯಲ್ಲಿನ ಎಲ್ಲ ವರ್ಗಗಳಿಗೆ ಮೀಸಲಾತಿ ಸೌಲಭ್ಯ ಹಂಚಿಕೆ ಮಾಡಲು ಸಹಕರಿಸಬೇಕೆಂದು ಕೋರಿದರು.ಈ ವೇಳೆ ನ್ಯಾ.ನಾಗಮೋಹನ್ ದಾಸ್ ಅವರನ್ನು ನಿಯೋಗದ ಸದಸ್ಯರು ಹೂಮಾಲೆ ಹಾಕಿ ಅಭಿನಂದಿಸಿದರು.ಮಾಜಿ ಸಂಸದ ಬಿ.ಎಂ.ಚಂದ್ರಪ್ಪ, ಸಮುದಾಯದ ಮುಖಂಡರಾದ ಕೆ.ಜೆ.ಜಗದೀಶ್, ಕೋಗಿಲು ವೆಂಕಟೇಶ್, ಮುತ್ತುರಾಜು, ದೊಡ್ಡಗುಬ್ಬಿ ಸತೀಶ್, ಅನಿಲ್ ಕೋಟಿ, ದೇವದಾಸ್, ಎಂ.ಶ್ರೀನಿವಾಸ್ ನ್ಯಾಯವಾದಿಗಳಾದ ಮೋಹನ್ ರಾಜ್, ಶ್ರೀ ಮಂಜುನಾಥ, ತುಳಸಿರಾಮ್, ಆದಿನಾರಾಯಣಪ್ಪ ಮುಂತಾದವರು ಇದ್ದರು.



