
ಚಿತ್ರದುರ್ಗ:ಐವತ್ತು ವರ್ಷಗಳ ಸುದೀರ್ಘ ರಾಜಕೀಯ ಪಯಣ ಪೂರೈಸಿರುವ ರೈತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ B. S. Yediyurappa ಅವರ ಅಭಿಮಾನೋತ್ಸವದ ಅಂಗವಾಗಿ ಶುಕ್ರವಾರ ನಗರದಲ್ಲಿ ವೈಭವೋಪೇತ ಮೆರವಣಿಗೆ ನಡೆಯಿತು.
ದಕ್ಷಿಣ ಭಾರತದಲ್ಲಿ ಕಮಲ ಅರಳಿಸಿದ ನಾಯಕರಾಗಿ ಗುರುತಿಸಿಕೊಂಡಿರುವ ಬಿಎಸ್ವೈ ಅವರು ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು, ರೈತರ ಹೆಸರಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದ ರೈತನಾಯಕನಾಗಿ ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ. ಮೆರವಣಿಗೆಯ ಮಾರ್ಗದುದ್ದಕ್ಕೂ ಅಭಿಮಾನಿಗಳು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಸಂಜೆ 6 ಗಂಟೆಗೆ ಕನಕ ವೃತ್ತದಿಂದ ಆರಂಭವಾದ ಮೆರವಣಿಗೆ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ಸರ್ಕಲ್, ಎಸ್ಬಿಎಂ ವೃತ್ತ, ಅಂಬೇಡ್ಕರ್ ಪ್ರತಿಮೆ ಮುಂಭಾಗದ ಮೂಲಕ ಸಾಗಿಬಂದು ಮದಕರಿನಾಯಕನ ಪ್ರತಿಮೆ ಬಳಿ ಮುಕ್ತಾಯಗೊಂಡಿತು.
ಡೊಳ್ಳು, ಉರುಮೆ, ತಮಟೆ, ನಂದಿಕೋಲು, ವೀರಗಾಸೆ, ಗೊರವರ ಕುಣಿತ, ಕಹಳೆ ಹಾಗೂ ಸೋಮನ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಕಳೆ ತಂದವು. ತೆರೆದ ವಾಹನದಲ್ಲಿ ವಿರಾಜಮಾನರಾಗಿದ್ದ ಯಡಿಯೂರಪ್ಪ ಅವರು ರಸ್ತೆ ಎರಡೂ ಬದಿಗಳಲ್ಲಿ ನಿಂತಿದ್ದ ಜನರತ್ತ ಕೈಬೀಸಿ ಅಭಿನಂದನೆ ಸ್ವೀಕರಿಸಿದರು.
ಮೆರವಣಿಗೆಯಲ್ಲಿ ವಿವಿಧ ಸ್ಥಬ್ಧಚಿತ್ರಗಳು ಜನರ ಗಮನ ಸೆಳೆದವು. ಬಿಜೆಪಿ ರಾಜ್ಯಾಧ್ಯಕ್ಷ B. Y. Vijayendra, ಸಂಸದ Govind Karjol, ಮಾಜಿ ಮುಖ್ಯಮಂತ್ರಿ D. V. Sadananda Gowda, ಮಾಜಿ ಸಚಿವರಾದ B. Sriramulu, Gali Janardhana Reddy, B. C. Patil ಸೇರಿದಂತೆ ಹಲವು ನಾಯಕರು ಹಾಗೂ ಬಿಜೆಪಿ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

