ಚಿತ್ರದುರ್ಗ, ಆ11: ನಿವೃತ್ತ ಸರ್ಕಾರಿ ನೌಕರರ ವಿವಿಧ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಕ್ಕಾಗಿ ಆ.29 ರಂದು ವಿನಾಯಕ ಕಲ್ಯಾಣ ಮಂಟಪದಲ್ಲಿ ಬೆಂಗಳೂರು ವಿಭಾಗ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್. ಭೈರಪ್ಪ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘಟನೆ ಹಿತದೃಷ್ಟಿ ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಏಪ್ರಿಲ್ ನಾಲ್ಕರಂದು ವಿಭಾಗ ಮಟ್ಟದ ಸಮಾವೇಶವನ್ನು ಬೆಂಗಳೂರಿನಲ್ಲಿ ನಡೆಸಿದ್ದೇವೆ. ಆದರೂ ನಮ್ಮ ಸಮಸ್ಯೆಗಳಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ನಾಲ್ಕು ಲಕ್ಷದ ಇಪ್ಪತ್ತು ಸಾವಿರ ನಿವೃತ್ತ ನೌಕರರು ರಾಜ್ಯದಲ್ಲಿದ್ದು, ಒಂದು ಲಕ್ಷ ಕುಟುಂಬ ಪಿಂಚಣಿದಾರರಿದ್ದಾರೆ. ನಿವೃತ್ತಿಯಾದವರು ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿರುವುದರಿಂದ ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ನಿವೃತ್ತ ನೌಕರರಿಗೂ ವಿಸ್ತರಿಸುವಂತೆ ಡಾ.ಎಲ್.ಭೈರಪ್ಪ ಸರ್ಕಾರಕ್ಕೆ ಮನವಿ ಮಾಡಿದರು.
ರಾಜ್ಯದಲ್ಲಿ 232 ಶಾಖೆಗಳಿದ್ದು, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರವನ್ನು ನಡೆಸಿದ್ದೇವೆ. ವಿಭಾಗ ಮಟ್ಟದ ಸಮಾವೇಶದಲ್ಲಿ ಎಂಟು ಜಿಲ್ಲೆಯ ನಿವೃತ್ತ ನೌಕರರು ಹಾಗೂ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳ ಹಾಗೂ ಸ್ಥಳೀಯ ಶಾಸಕರುಗಳನ್ನು ಸಮಾವೇಶಕ್ಕೆ ಆಹ್ವಾನಿಸಿದ್ದೇವೆಂದು ಹೇಳಿದರು.
ಕೇಂದ್ರ ಸಂಘದ ನಂಜಪ್ಪ, ಗುರುಲಿಂಗಸ್ವಾಮಿ, ಆನಂದಪ್ಪ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾಲತೇಶ ಮುದ್ದಜ್ಜಿ, ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರೇಮನಾಥ್, ನಿಕಟಪೂರ್ವ ಅಧ್ಯಕ್ಷ ರಂಗಪ್ಪರೆಡ್ಡಿ, ವೈ.ಚಂದ್ರಶೇಖರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು