ಎಲ್ಲಾ ಸರ್ಕಾರಿ ಸಂಸ್ಥೆಗಳಿಗೆ ನಳದ ಸಂಪರ್ಕ ಕಲ್ಪಿಸಿ : ಸಿಇಓ ದಿವಾಕರ್

ಜಿಲ್ಲಾ ಸುದ್ದಿ

ಜಲಜೀವನ್ ಮಿಷನ್‍ನಡಿ ಎಲ್ಲ ಶಾಲೆ, ಅಂಗನವಾಡಿ, ಆಸ್ಪತ್ರೆ, ಹಾಸ್ಟೆಲ್‍ಗಳಿಗೆ ನೀರು ಸಂಪರ್ಕ- ಎಂ.ಎಸ್. ದಿವಾಕರ್

 

 

 

ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲ ಶಾಲೆ, ಅಂಗನವಾಡಿ, ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್‍ಗಳು, ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳಿಗೆ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿಯ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಜನವಸತಿ ಪ್ರದೇಶಗಳಿಗೆ ನೀರಿನ ನಳದ ಸಂಪರ್ಕ ಕಲ್ಪಿಸಿ, ಕುಡಿಯುವ ನೀರು ಪೂರೈಸುವ ಕಾಮಗಾರಿಗಳು ನಡೆದಿವೆ.  ಈ ಸಂದರ್ಭದಲ್ಲಿ ಸಂಬಂಧಪಟ್ಟ ಜನವಸತಿ ಪ್ರದೇಶಗಳಲ್ಲಿ ಬರುವ ಎಲ್ಲ ಸರ್ಕಾರಿ ಶಾಲೆಗಳು, ಕಾಲೇಜುಗಳು, ಸರ್ಕಾರಿ ಆಸ್ಪತ್ರೆಗಳು, ಹಾಸ್ಟೆಲ್‍ಗಳು, ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಎಲ್ಲ ಸರ್ಕಾರಿ ಸಂಸ್ಥೆಗಳಿಗೆ ಕುಡಿಯುವ ನೀರಿನ ನಳದ ಸಂಪರ್ಕವನ್ನು ಕಲ್ಪಿಸಬೇಕು.  ಈ ನಿಟ್ಟಿನಲ್ಲಿ ಕಾಮಗಾರಿಗಳನ್ನು ಹಮ್ಮಿಕೊಳ್ಳಬೇಕು.  ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಲೆ, ಕಾಲೇಜು, ಅಂಗನವಾಡಿ, ಹಾಸ್ಟೆಲ್, ಆಸ್ಪತ್ರೆಗಳ ಪಟ್ಟಿಯನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ಒದಗಿಸಬೇಕು, ಅದರನ್ವಯ ಅಧಿಕಾರಿಗಳು ನಳದ ಸಂಪರ್ಕವನ್ನು ಕಲ್ಪಿಸಬೇಕು ಎಂದು ಸೂಚನೆ ನೀಡಿದರು.
2022-23 ನೇ ಸಾಲಿಗೆ ವಿಶೇಷ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಒಟ್ಟು 433 ಕಾಮಗಾರಿಗಳಿಗೆ 9.88 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ, ಅದರನ್ವಯ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ.  ಇದರಲ್ಲಿ ಮುಂದುವರೆದ ಕಾಮಗಾರಿಗಳು, ವಿದ್ಯುದೀಕರಣ ಬಾಕಿ, ತುರ್ತು ಕುಡಿಯುವ ನೀರಿನ ಕಾಮಗಾರಿಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ಹಾಗೂ ದುರಸ್ತಿ ಹಾಗೂ ಹೊಸ ಕಾಮಗಾರಿಗಳು ಸೇರಿವೆ. ಅಲ್ಲದೆ ಈ ಐದೂ ತಾಲ್ಲೂಕುಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕರ ಸೂಚನೆಯಂತೆ 21 ಕಾಮಗಾರಿಗಳಿಗೆ 8.61 ಕೋಟಿ ರೂ. ಅನುದಾನದಡಿ ಕ್ರಿಯಾ ಯೋಜನೆ ಸಿದ್ಧಪಡಿಸಿದೆ.  ಭದ್ರಾ ಜಲಾಶಯದಿಂದ ಹೊಸದುರ್ಗ ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಹೊಸದುರ್ಗ ಪಟ್ಟಣ ಸೇರಿದಂತೆ ಇತರೆ 46 ಜನವಸತಿ ಪ್ರದೇಶಗಳಿಗೆ ಹಾಗೂ ತರೀಕೆರೆ ತಾಲ್ಲೂಕಿನ 133 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಎರಡನೆ ಹಂತಕ್ಕೆ 350 ಕೋಟಿ ರೂ. ಯೋಜನೆಗೆ ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಬೇಕಾಗಿದೆ.  2024 ರೊಳಗೆ ಜಿಲ್ಲಾ ವ್ಯಾಪ್ತಿಯ ಎಲ್ಲ ಜನವಸತಿಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಮಾರ್ಗಸೂಚಿ ಪ್ರಕಾರ ನಳ ಸಂಪರ್ಕ ಕಲ್ಪಿಸಬೇಕಿದೆ.  ಈ ನಿಟ್ಟಿನಲ್ಲಿ ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಜಿ.ಪಂ. ಉಪಕಾರ್ಯದರ್ಶಿ ಡಾ. ರಂಗಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹಾಂತಪ್ಪ ಕನ್ನೂರು, ಡಿಡಿಪಿಐ ಜೆ. ರವಿಶಂಕರರೆಡ್ಡಿ, ಡಿಹೆಚ್‍ಒ ಡಾ. ಆರ್. ರಂಗನಾಥ್, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗೇಂದ್ರ ನಾಯಕ್ ಸೇರಿದಂತೆ ಸಣ್ಣ ನೀರಾವರಿ ವಿಭಾಗದ ಎಇಇ ಅವಿನಾಶ್ ಪಿ., ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ ಎಸ್ ನಾಡರ್, ಸಹಾಯಕ ಅಭಿಯಂತರ ಸಾಜಿದಾ ಫರ್ನಾಜ್, ಕಿರಿಯ ಅಭಿಯಂತರ ಅನುಷ ಎಸ್.ವಿ. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *