ನಯವಂಚಕ‌ ರಾಜಕಾರಣಿಗಳ ಬಗ್ಗೆ ಜಾಗ್ರತೆಯಿರಲಿ

ರಾಜ್ಯ

ಮತನೀಡಿ ಅಧಿಕಾರ ನೀಡಿರುವ ಮೊಳಕಾಲ್ಮೂರು ಮತಕ್ಷೇತ್ರದ ಜನರ ಅಭಿವೃದ್ಧಿ ಕಡೆ ಗಳಿಸಿರುವ ಸಚಿವ ಶ್ರೀರಾಮುಲು ಬಳ್ಳಾರಿ ಗ್ರಾಮೀಣ ಮತಕ್ಷೇತ್ರದ ಜನರ ಅಭಿವೃದ್ಧಿಗಾಗಿ ಇಡೀ ರಾತ್ರಿ ಧರಣಿ ನಡೆಸುತ್ತಿರುವುದು ಮತಕ್ಷೇತ್ರದ ಜನರಿಗೆ ಮಾಡಿದ ದ್ರೋಹವಾಗಿದೆ ಎಂದು ಮೊಳಕಾಲ್ಮೂರು ಕಾಂಗ್ರೆಸ್ ಮುಖಂಡ ಡಾ.ಬಿ.ಯೋಗೇಶ್ ಬಾಬು ಟೀಕಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಅಧಿಕಾರದ ಪೂರ್ಣವಧಿಯಲ್ಲಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಎಂದೂ ಸಿಎಂ ಬಳಿ ಚಕಾರ ಎತ್ತಿಲ್ಲ. ಮೊಳಕಾಲ್ಮೂರು ಅತ್ಯಂತ ಹಿಂದುಳಿದ ತಾಲ್ಲೂಕು, ಮತಕ್ಷೇತ್ರವಾಗಿದ್ದರೂ, ವಿಶೇಷ ಅನುದಾನ ಕೂಡ ಕೊಡಿಸಿಲ್ಲ. ಈಗ ದಿಢೀರ್ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಹರಿಕಾರರಾಗಲು ಹಗಲು ರಾತ್ರಿ ಹೋರಾಟ ನಡೆಸಲು ಮುಂದಾಗಿರುವುದು ವಿಪರ್ಯಾಸವಾಗಿದೆ. ಎಸ್ಟಿ ಮೀಸಲಾತಿ ಹೆಚ್ಚಳ ಹೋರಾಟದಲ್ಲಿ ವಾಲ್ಮೀಕಿ ಗುರುಪೀಠದ ಶ್ರೀಗಳ ಪಾತ್ರ ಮಹತ್ವ ಇದೆ. ಆದರೆ, ಶ್ರೀಗಳಿಗಿಂತ ತನ್ನದೇ ಹೋರಾಟ ಇದೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದನ್ನು ಮತದಾರರು ಗಮನಿಸುತ್ತಿದ್ದಾರೆ ಎಂಬುದು ಶ್ರೀರಾಮುಲು ಅರಿಯಬೇಕಿದೆ. ಚುನಾವಣೆ ಸಂದರ್ಭದಲ್ಲಿ ಹಣದಹೊಳೆ ಹರಿಸಿದರೆ ಸಾಕು, ಅಧಿಕಾರ ಸುಲಭವಾಗಿ ಸಿಗಲಿದೆ ಎಂದು ಶ್ರೀರಾಮುಲು ತಿಳಿದಿದ್ದಾರೆ. ಈ ಸಲ ಮೊಳಕಾಲ್ಮೂರು ಮತದಾರರನ್ನು ಅಷ್ಟು ಸುಲಭವಾಗಿ ವಂಚಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರವಾಹದಿಂದ ಕೊಚ್ಚಿಹೋಗಿರುವ ತುಂಗಭದ್ರಾ ಕೆಳಹಂತದ ಕಾಲುವೆ ದುರಸ್ತಿಕಾರ್ಯ ಸಾಗಿದೆ. ಇಂತಹ ಸಂದರ್ಭದಲ್ಲಿ ಆಡಳಿತರೂಢ ಸರ್ಕಾರದ ಸಚಿವರಾಗಿ ಕಾಲುವೆ ಬಳಿ ಇಡೀ ರಾತ್ರಿ ಹೈಡ್ರಾಮ ನಡೆಸುತ್ತಿರುವುದು ಮುಜುಗರ ಹುಟ್ಟಿಸಿದೆ. ಅಲ್ಲದೇ ಕ್ಯಾಂಪ್ ಫೈರ್ ಹಾಕಿರುವುದು ನಾಚಿಗೇಡಿನ ಸಂಗತಿ ಆಗಿದೆ ಎಂದು ಹೇಳಿದರು.
ಶ್ರೀರಾಮುಲು ಮೊದಲು ಅಧಿಕಾರ ನೀಡಿದ ಮತದಾರರ ಪರ ಅಭಿವೃದ್ಧಿಗಾಗಿ ಶಪಥ ಮಾಡಲಿ. ಐದು ವರ್ಷ ಎಂದೂ ಮತಕ್ಷೇತ್ರದ ಜನರ ಬಗ್ಗೆ ಕಾಳಜಿವಹಿಸದ ಸಚಿವ ಶ್ರೀರಾಮುಲು ಬಳ್ಳಾರಿ ಜನರ ಬಗ್ಗೆ ಕಾಳಜಿ ತೋರಿಸುವುದನ್ನು ಮೊದಲು ಬಿಡಬೇಕು ಎಂದರು.ಇನ್ನಾದರೂ ಮತಕ್ಷೇತ್ರ ಜನರು ಶ್ರೀರಾಮುಲುರಂಥಹ ನಯವಂಚಕ ರಾಜಕಾರಣಿಗಳ ಬಗ್ಗೆ ಜಾಗ್ರತೆ ವಹಿಸಬೇಕು. ಮತಕ್ಷೇತ್ರದಲ್ಲಿ ಜನರ ಸಂಕಷ್ಟಕ್ಕೆ ಸದಾ ತಮ್ಮನ್ಬು ಒಡ್ಡಿಕೊಳ್ಳುವವರಿಗೆ ಆದ್ಯತೆ ನೀಡಬೇಕು ಎಂದಿದ್ದಾರೆ.

 

 

 

Leave a Reply

Your email address will not be published. Required fields are marked *