ಯೋಗಾನಾಥ್ ವಿಶ್ವ ದಾಖಲೆಗೆ ಜಿಲ್ಲಾಡಳಿತ ಸಜ್ಜು

ಆರೋಗ್ಯ

15 ಸಾವಿರ ಜನರಿಂದ ಯೋಗ ಪ್ರದರ್ಶನ  ವಿಶ್ವದಾಖಲೆ ಯೋಗಾಥಾನ್-2022 ಯಶಸ್ವಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ. ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಯೋಗಾಥಾನ್-2022 ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

 

 


ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ವಿಶ್ವ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಜೂನ್ 21 ರಂದು ಯೋಗಾಥಾನ್-2022ಕ್ಕೆ ಚಾಲನೆ ನೀಡಲಾಗಿದೆ. ಯುವಕರನ್ನು ಯೋಗದ ಕಡೆ ಸೆಳೆದು, ಉದ್ಯಮಶೀಲತೆ, ಸ್ವ ಉದ್ಯೋಗ, ಇತರೆ ಕಲೆಗಳಲ್ಲಿ ಯುವಶಕ್ತಿಯನ್ನು ತೊಡಗಿಸುವ ಸದುದ್ದೇಶ ಯೋಗಾಥಾನ್‍ದಾಗಿದೆ. ಯೋಗದ ಮಹತ್ವ ತಿಳಿಸಿ, ಯೋಗದಿಂದ ದೊರಕರುವ ಆರೋಗ್ಯ ಪ್ರಯೋಜನಗಳ ಕುರಿತು ಜಾಗೃತಿ ಮೂಡಿಸಲಾಗುವುದು. ಯೋಗಾಥಾನ್ ಮೂಲಕ ರಾಜ್ಯದ ಒಂದು ಕೋಟಿ ಜನರು ಯೋಗವನ್ನು ದಿನನಿತ್ಯ ಜೀವನದಲ್ಲಿ ಅಳವಡಿಕೊಳ್ಳುವಂತೆ ಪ್ರೇರಣೆ ನೀಡಲಾಗುವುದು.
ಆಗಸ್ಟ್ 6 ರಿಂದ 27ರ ವರೆಗೆ ವಿಶ್ವ ದಾಖಲೆಯ ಯೋಗಥಾನ್ ಜರುಗಲಿದೆ. ಪ್ರತಿದಿನ ಬೆಳಿಗ್ಗೆ 6:30ಕ್ಕೆ ಸರಿಯಾಗಿ ಯುವಕರಿಗೆ ಯೋಗ ತರಬೇತಿ ನೀಡಲಾಗುವುದು. ಆಗಸ್ಟ್ 28 ರಂದು ರಾಜ್ಯದಲ್ಲಿ ಏಕಕಾಲಕ್ಕೆ 5 ಲಕ್ಷ ಜನರು ಯೋಗದ ಆಸನಗಳನ್ನು ಪ್ರದರ್ಶಿಸುವುದರ ಮೂಲಕ ವಿಶ್ವ ದಾಖಲೆ ನಿರ್ಮಿಸಲಿದ್ದಾರೆ. ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಸಾಮೂಹಿಕ ಯೋಗ ಪ್ರದರ್ಶನವನ್ನು ಏರ್ಪಡಿಸಬೇಕು. 13 ವರ್ಷ ಮೇಲ್ಪಟ್ಟ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯೋಗಾಥಾನ್‍ನಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಎಲ್ಲಾ ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ತಪ್ಪದೇ ಯೋಗತರಬೇತಿ ನೀಡಬೇಕು. ಪಿ.ಯು. ಹಾಗೂ ಪದವಿ ಕಾಲೇಜುಗಳ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಘಟಕಗಳು, ಐಮಂಗಲದ ಪೊಲೀಸ್ ತರಬೇತಿ ಕೇಂದ್ರ ಪ್ರಶಿಕ್ಷಣಾರ್ಥಿಗಳು ಯೋಗಾಥಾನ್‍ನಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ ನಿರ್ದೇಶನ ನೀಡಿದರು. ಆಸಕ್ತ ಸಾರ್ವಜನಿಕರು ಸಹ ಯೋಗಾಥಾನ್‍ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು. ಯೋಗಾಥಾನ್-2022 ಯಶಸ್ವಿ ಅನುಷ್ಠಾನಕ್ಕೆ ನಿಯೋಜಿಸಲಾದ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
300 ಯೋಗ ಶಿಕ್ಷಕರಿಗೆ ತರಬೇತಿ: ವಿಶ್ವ ದಾಖಲೆಯ ಯೋಗವು ಶಿಷ್ಟಾಚಾರ ಕ್ರಮ ಹೊಂದಿದೆ. ನಿಗದಿತ ಸಮಯದಲ್ಲಿ ಯೋಗಾಸನಗಳನ್ನು ಪೂರ್ಣಗೊಳಿಸೇಕು. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜು ಹಾಗೂ ಆಸಕ್ತರಿಗೆ ತರಬೇತಿ ನೀಡಲು ಜಿಲ್ಲೆಯ ವಿವಿಧ ಯೋಗ ಸಂಘ ಸಂಸ್ಥೆಗಳ 300 ಯೋಗ ಶಿಕ್ಷಕರಿಗೆ ತರಬೇತಿ ನೀಡಲಾಗುವುದು. ತರಬೇತಿ ಪಡೆದ ಪ್ರತಿ ಯೋಗ ಶಿಕ್ಷಕರು 50 ಜನರಿಗೆ ಯೋಗಾಸನಗಳ ತರಬೇತಿ ನೀಡುವರು. ಜಿಲ್ಲೆಯಲ್ಲಿ 15 ಸಾವಿರ ಜನರು ಯೋಗ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆನ್ ಲೈನ್ ಮೂಲಕ ಯೋಗಥಾನ್-2022ಕ್ಕೆ ನೋಂದಣಿ: ಯೋಗಥಾನ್-2022 ರಲ್ಲಿ ಯೋಗಪಟು ಹಾಗೂ ಯೋಗ ತರಬೇತುದಾರರಾಗಿ ಆನ್ ಲೈನ್ ವೆಬ್ ಸೈಟ್ https://www.yogathon2022.com/ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರೀಶ್.ಯು, ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಶಿವಕುಮಾರ್, ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಎನ್.ಸುಹಾಸ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ.ಬಿ.ವಿ.ತುಕಾರಾಂರಾವ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
(ಫೋಟೋ ಕಳುಹಿಸಿದೆ)
========

Leave a Reply

Your email address will not be published. Required fields are marked *