ಚಿತ್ರದುರ್ಗ,ಸೆ.01: ಹೆಲ್ಮೆಟ್ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಕಳ್ಳರ ತಂಡವೊಂದು ಹಾಡು ಹಗಲೇ ಮನೆಯ ಬೀಗ ಹೊಡೆದು, ಒಳಗೆ ನುಗ್ಗಿ ಬೀರುವಿನಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಒಡವೆಗಳನ್ನು ದೋಚಿ ಪರಾರಿಯಾಗಿರುವ ಚಿತ್ರದುರ್ಗದ ಚಳ್ಳಕೆರೆಯ ಹೊಟ್ಟೆಜ್ಜಪ್ಪನ ಕಪಿಲೆಯಲ್ಲಿ ಸೋಮವಾರ ನಡೆದಿದೆ.
ಮನೆ ಮಾಲೀಕ ಶ್ರೀನಿವಾಸ್ ಜಮೀನಿನಲ್ಲಿ ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿ, ಹೋಗಿದ್ದರು. ಇದನ್ನೆ ಗಮನಿಸಿ ಹೊಂಚು ಹಾಕುತ್ತಿದ್ದ ದರೋಡೆಕೋರರ ತಂಡ ಮನೆ ಬಾಗಿಲು ಮುರಿದು ಒಳಗೆ ನುಗ್ಗಿ ಬೀರುವಿನಲ್ಲಿದ್ದ 45 ಗ್ರಾಂ ಲಾಂಗ್ ಚೈನ್, ಮೂರು ಜೊತೆ ಕಿವಿಯೊಲೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಹೊಲಕ್ಕೆ ಹೋಗಿದ್ದ ಶ್ರೀನಿವಾಸ್ ಮನೆಗೆ ಬಂದು ನೋಡಿದಾಗ ಮನೆ ಬೀಗ ಮುರಿದು ಬಿದ್ದಿತ್ತು. ಮನೆಯಲ್ಲಿ ಕಳುವಾಗಿದ್ದು, ಗೊತ್ತಾಗಿ, ಕೂಡಲೇ ಚಳ್ಳಕೆರೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸರು ಬಂದು ಸ್ಥಳ ಪರಿಶೀಲಿಸಿ ಪ್ರಕರಣವನ್ನು ದಾಖಲಿಸಿಕೊಂಡು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.





