ಬಿಜೆಪಿ ಪಕ್ಷ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತದೆ

ರಾಜ್ಯ

ಕಳೆದ 10 ವರ್ಷದಿಂದ ರಾಜ್ಯದ ವಿವಿಧ ರೀತಿಯ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಫಂದಿಸಿಲ್ಲ, ಅಲ್ಲಿಂದ ಯಾವ ರೀತಿಯ ಸಹಾಯವೂ ಸಹಾ ರಾಜ್ಯಕ್ಕೆ ಬಂದಿಲ್ಲ, ಈ ಹಿನ್ನಲೆಯಲ್ಲಿ ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದ್ದರೆ ನಮಗೆ ಸಹಾಯವಾಗಲಿದೆ ಇದರ ಬಗ್ಗೆ ಆಲೋಚಿಸಿ ಏ.26ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನ ಮಾಡಿಸುವಂತೆ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಕರೆ ನೀಡಿದರು.
ಚಿತ್ರದುರ್ಗ ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆಯಿಂದ ಮಾಡುತ್ತಿದೆ, ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ನೆರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದರೆ ನಮ್ಮ ರಾಜ್ಯಕ್ಕೆ ಅನುದಾನವೇ ನೀಡುತ್ತಿಲ್ಲ. ಅಲ್ಲದೆ ಕೇಂದ್ರ ಸರ್ಕಾರ ಅಪ್ಪರ್ ಭದ್ರಾ ಯೋಜನೆಗೆ ನೀಡುತ್ತೇನೆ ಎಂದು ಹೇಳಲಾದ 5300 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಲ್ಲಿ ಮೀನಾಮೇಷ ಮಾಡುತ್ತಿದೆ. ಇದರ ಬಗ್ಗೆ ರಾಜ್ಯದಿಂದ ಆಯ್ಕೆಯಾದ ಯಾವ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲೆಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಏನು ಅಭಿವೃದ್ದಿಯಾಗಿಲ್ಲ, ಕೇಂದ್ರದಿಂದ ಯಾವ ಅನುದಾನವೂ ಸಹಾ ಬಂದಿಲ್ಲ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿಯಾಗಿದ್ದರಿಂದ ಸೋಲನ್ನು ಅನುಭವಿಸಬೇಕಾಯಿತು. ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪರವಾಗಿ ಇದೆ. ಆದರೆ ಬಿಜೆಪಿ ಇವರ ವಿರುದ್ದವಾಗಿ ಇದೆ, ಕಾಂಗ್ರೆಸ್ ಸರ್ಕಾರ ಜನರ ಪರವಾಗಿ ಇದೆ. ಅವರಿಗಾಗಿ ಕೆಲಸವನ್ನು ಮಾಡಲಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹು ಮತದಿಂದ ಗೆಲ್ಲಿಸಬೇಕಿದೆ ಎಂದು ಸುಧಾಕರ್ ಕರೆ ನೀಡಿದರು.
ಮಾಜಿ ಸಚಿವರಾದ ಹೆಚ್ ಅಂಜನೇಯ ಮಾತನಾಡಿ, ಈ ಚುನಾವಣೆಯಲ್ಲಿ ನಾವು ಯಾವುದೇ ಧರ್ಮ, ರಾಮನ ಬಗ್ಗೆ ಮಾತನಾಡುವುದಿಲ್ಲ, ನಾವು ನ್ಯಾಯಯತವಾದ ರೀತಿಯಲ್ಲಿ ಚುನಾವಣೆಯನ್ನು ನಡೆಸುವುದರ ಮೂಲಕ ಗೆಲುವನ್ನು ಸಾಧಿಸುತ್ತೇವೆ, ನಮ್ಮ ದೇಶ ಜಾತ್ಯಾತೀತವಾದ ದೇಶವಾಗಿದೆ. ಇಲ್ಲಿ ಎಲ್ಲಾ ಜನಾಂಗದವರು ಸಹಾ ವಾಸ ಮಾಡುತ್ತಾರೆ. ಸಹೋದರರಂತೆ ಬಾಳುವೆಯನ್ನು ನಡೆಸುತ್ತಿದ್ದಾರೆ. ಇಂತಹರ ಮಧ್ಯೆ ವಿಷ ಬೀಜ ಬಿತ್ತುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ, ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆದ ಸರ್ಕಾರವಾಗಿದೆ. ಚುನಾವಣೆಯ ಸಮಯದಲ್ಲಿ ಮತದಾರರಿಗೆ ನೀಡಿದ ವಾಗ್ದಾನದಂತೆ 5 ಗ್ಯಾರೆಂಟಿಗಳನ್ನು ಸಹಾ ಈಡೇರಿಸಿದೆ.ಇದನ್ನು ಮತದಾರರಿಗೆ ತಿಳಿಸುವುದರ ಮೂಲಕ ಮತಯಾಚನೆಯನ್ನು ಮಾಡುವಂತೆ ತಿಳಿ ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದು ಹಲವಾರು ಯೋಜನೆಯನ್ನು ಕಾರ್ಯಗತ ಮಾಡಿದೆ ಇದನ್ನು ಮತದಾರರಿಗೆ ತಿಳಿಸುವುದರ ಮೂಲಕ ಮತಯಾಚನೆಯನ್ನು ಮಾಡಬೇಕಿದೆ. ಇಲ್ಲಿ ಯಾರನ್ನು ಸಹಾ ತೆಗಳುವ ಕಾರ್ಯವನ್ನು ಮಾಡದೇ ಸಿದ್ದರಾಮಯ್ಯ ಸರ್ಕಾರ ಸಾಧನೆಯನ್ನು ಹೇಳಿ ಮತವನ್ನು ಕೇಳಬೇಕಿದೆ, ಕೇಂದ್ರದಲ್ಲಿ ಇಂಡಿಯಾ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ತಿಳಿಸಿದ್ದಾರೆ. ಏ.4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಇತರೆ ನಾಯಕರು ಭಾಗವಹಿಸಲಿದ್ದಾರೆ ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಮಠಾಧೀಶರ ಆಶಯವನ್ನೇ ಹೊಂದಿದ್ದು, ಜನರನ್ನು ಆರ್ಥಿಕವಾಗಿ ಮೇಲೆತ್ತುವ ಕೆಲಸ ಮಾಡಲಾಗುತ್ತಿದೆ. ದೇಶದಲ್ಲಿ ಬಿಜೆಪಿ ಪಕ್ಷದವರು ನಿತ್ಯ ಜನರನ್ನು ಮೂರ್ಖರನ್ನಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ರಾಜ್ಯದ ಜನ ನಾವು ಪ್ರಬುದ್ಧರು ಎಂಬುದನ್ನು ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ದೃಢ ಪಡಿಸಿದ್ದಾರೆ.ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾಯಕ ತತ್ವದಡಿ ಆಡಳಿತ ನಡೆಸುತ್ತಿದೆ. ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಬುದ್ಧ, ಬಸವಣ್ಣ ಸೇರಿದಂತೆ ಅನೇಕ ಮಹನೀಯರ ಆಶಯದಂತೆ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.

 

 

ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಆಗಿದ್ದು, ಕಳೆದ ಬಾರಿ ಸೋತ ಮರುದಿನದಿಂದಲೇ ಕ್ಷೇತ್ರದ ಜನರ ಜೊತೆ ಓಡಾಡಿದ್ದೇನೆ. ಭದ್ರಾ ಮೇಲ್ದಂಡೆ, ರೈಲ್ವೆ ಸೇರಿದಂತೆ ಅನೇಕ ಯೋಜನೆಗಳ ಜಾರಿಗೆ ಜನರ ಧ್ವನಿಯಾಗಿದ್ದೇನೆ. ಭದ್ರಾ ಮೇಲ್ದಂಡನೆ ಯೋಜನೆ ಕಾಮಗಾರಿಗೆ ತೀವ್ರತೆ ನೀಡಲು ಶ್ರಮಿಸಿದ್ದೇನೆ. ಜೊತಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಹಣದ ಕೊರತೆ ಆಗದಂತೆ ಹೇರಳವಾಗಿ ಅನುದಾನ ನೀಡಿದ್ದರು. ಆದರೆ ಕಳೆದ ಐದು ವರ್ಷ ಕಾಮಗಾರಿ ಕುಂಠಿತವಾಗಿದೆ. ಬಿಜೆಪಿಯ ಶಾಸಕರು ಮತ್ತು ಸಂಸದರ ಮಧ್ಯೆ ಸಮನ್ವತೆ ಕೊರತೆ ಇದಕ್ಕೆ ಕಾರಣವಾಗಿದೆ ಎಂದರು.
ಕ್ಷೇತ್ರದಲ್ಲಿ ಏಳು ಮಂದಿ ಶಾಸಕರು, ಮಂಡಳಿ-ನಿಗಮದ ಅಧ್ಯಕ್ಷರು, ಜಿಲ್ಲಾ ಸಚಿವರು, ಹಾಲಿ-ಮಾಜಿ ಮಂತ್ರಿ ಹಾಗೂ ಸಾವಿರಾರು ಮುಖಂಡರು ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಣ್ಣ ಅಪಸ್ವರ ಇಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವೆಲ್ಲ ಬೆಳವಣಿಗೆಗಳು ಲಕ್ಷಾಂತರ ಮತಗಳ ಅಂತರದಲ್ಲಿ ಪಕ್ಷದ ಗೆಲುವಿಗೆ ಸಹಕಾರಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿ.ಎಸ್.ಮಂಜುನಾಥ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಹನುಮಲಿ ಷಣ್ಮಖಪ್ಪ, ಜಿ.ಎಸ್.ಮಂಜುನಾಥ್, ಕೆ.ಸಿ.ನಾಗರಾಜ್, ಯೋಗಿಶ್ ಬಾಬು, ಉಮಾಪತಿ, ಶ್ರೀಮತಿ ಗೀತಾ ನಂದಿನಿ ಗೌಡ, ಆರ್.ಕೆ.ಸರ್ದಾರ ಸೇರಿದಂತೆ ಇತರರು ಮಾತನಾಡಿದರು. ಡಿಸಿಸಿ ಅಧ್ಯಕ್ಷರಾದ ತಾಜ್ ಪೀರ್ ಅಧ್ಯಕ್ಷತೆಯನ್ನು ವಹಿಸಿದ್ದರು

Leave a Reply

Your email address will not be published. Required fields are marked *