ಎಎಪಿ ಚುನಾವಣಾ ಪ್ರಚಾರ ದಾವಣಗೆರೆಯಿಂದ ಆರಂಭ 4 ರಂದು ಕೇಜ್ರಿವಾಲ್ ಉದ್ಘಾಟನೆ

ರಾಜ್ಯ

ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರವನ್ನು ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಿಂದ ಪ್ರಾರಂಭಿಸುತ್ತಿದ್ದು, ಮಾರ್ಚಿ 4 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಪಕ್ಷದ ಕರ್ನಾಟಕ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಇ.ಜಗದೀಶ್ ಹೇಳಿದರು.

 

 

 

ನಗರದ ಪತ್ರಿಕಾ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದು ಪಕ್ಷದ ಮೊದಲ ಚುನಾವಣಾ ಪ್ರಚಾರ ಸಮಾರಂಭವಾಗಿದ್ದು ಕ್ರೇಜಿವಾಲ್ ರವರು ಉದ್ಘಾಟನೆ ಮಾಡಲಿದ್ದಾರೆ. ಪಂಜಾಬ್ ನ ಮುಖ್ಯಮಂತ್ರಿಗಳಾದ ಭಗವತ್ ಸಿಂಗ್ ಮಾನ್ ರವರು ಆಗಮಿಸಲಿದ್ದಾರೆ. ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಸುಮಾರು 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಅರವಿಂದ್ ಕ್ರೇಜಿವಾಲ್ ರವರು ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ರಚನೆ ಮಾಡಲು ಈ ಸಮಾರಂಭದ ಮೂಲಕ ನಾಂದಿಯಾಡಲಿದ್ದಾರೆ ಎಂದರು.
ದೆಹಲಿಯಲ್ಲಿ ಎರಡನೇ ಭಾರೀ ಆಧಿಕಾರ ಪಡೆದಿರುವ ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತಿದ್ದು, ರಾಜ್ಯದಲ್ಲಿಯೂ ಕೂಡ ದೆಹಲಿ ಮಾದರಿ ಹಾಗೂ ಅಂಬೇಡ್ಕರ್ ರವರು ನೀಡಿದ ಸಂವಿಧಾನದ ರೀತಿಯ ಸರ್ಕಾರ ನೀಡಲಿದ್ದೇವೆ. ದೆಹಲಿಯಲ್ಲಿ ನಮ್ಮ ಸರ್ಕಾರದ ಅಭಿವೃದ್ಧಿಯನ್ನು ಕಂಡು ಬಿಜೆಪಿ ಸರ್ಕಾರ ದೆಹಲಿ ಉಪ ಮುಖ್ಯಮಂತ್ರಿಗಳಾದ ಮನೀಷ್ ಸಿಸೋಡಿಯಾರವರನ್ನು ಬಂಧಿಸಿದ್ದಾರೆ ಇದು ಖಂಡನೀಯ. ಐ.ಟಿ, ಇ.ಡಿ, ಸಿ.ಬಿ.ಐ ಎಲ್ಲಾ ಅಧಿಕಾರಿಗಳು ಅವರ ಕೈಯಲ್ಲಿವೆ. ಅವುಗಳನ್ನು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ನಿನ್ನೆ ಮೋದಿಯವರು ರಾಜ್ಯಕ್ಕೆ ಆಗಮಿಸಿದಾಗ ಅಭಿವೃದ್ಧಿ ಬಗ್ಗೆ ಮಾತನಾಡಲಿಲ್ಲ. ಮೋದಿಯವರು ಸಣ್ಣತನ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯಿಂದ ಅಭಿವೃದ್ಧಿ ಶೂನ್ಯ. ಅವರು 20% ನಿಂದ 40% ಕಮೀಷನ್ ನಲ್ಲಿ ತೊಡಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ಬಡತನ ಹೆಚ್ಚಾಗಿದೆ. ಕೂಲಿ ಕಾರ್ಮಿಕರ ಸಂಖ್ಯೆ ಜಾಸ್ತಿಯಾಗಿದೆ. ಬಿಜೆಪಿ ಪಕ್ಷ ಮುಂದುವರಿದವರ ಪರವಾಗಿದೆ. ಬಡವರ ಪರವಾಗಿಲ್ಲ. ಭಿಕ್ಷುಕರ ಸಂಖ್ಯೆ ಜಾಸ್ತಿಯಾಗಿದೆ. ಇವರ ಆಡಳಿತದಲ್ಲಿ ಮಾಧ್ಯಮ ವರ್ಗದವರು ಬಡತನಕ್ಕೆ ಹೋಗುತ್ತಾರೆ. ಬಡವರು ಬೀದಿಗೆ ಬರುತ್ತಾರೆ ಆದ್ದರಿಂದ ಭ್ರಷ್ಟಾಚಾರ ರಹಿತ ಸರ್ಕಾರಕ್ಕಾಗಿ ಆಮ್ ಆದ್ಮಿ ಪಕ್ಷ ಬೆಂಬಲಿಸಿ ಎಂದು ಮನವಿ ಮಾಡಿದರು‌.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷರಾದ ಫಾರೂಕ್ ಅಲಿ, ಉಪಾಧ್ಯಕ್ಷ, ಮೊಹಮದ್ ಇಮ್ರಾನ್, ಕುಬೇಂದ್ರ ನಾಯ್ಕ್, ಲಕ್ಷ್ಮೀನಾರಾಯಣ ರೆಡ್ಡಿ, ಕೆಂಚಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *