ಮತಯಾಚಿಸುವ ಹಕ್ಕು ಬಿಜೆಪಿಗೆ ಇಲ್ಲ:ಮಾಜಿ ಸಚಿವ ಎಚ್.ಆಂಜನೇಯ ಆರೋಪ

ಜಿಲ್ಲಾ ಸುದ್ದಿ

 

ಮತಯಾಚಿಸುವ ಹಕ್ಕು ಬಿಜೆಪಿಗೆ ಇಲ್ಲ:ಮಾಜಿ ಸಚಿವ ಎಚ್.ಆಂಜನೇಯ ಆರೋಪ

ರಾಜ್ಯ, ಕೇಂದ್ರದಲ್ಲಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿರುವ ಬಿಜೆಪಿ ಸರ್ಕಾರ ಸಲ್ಲದ ವಿಚಾರಗಳನ್ನು ಮುನ್ನೇಲೆಗೆ ತಂದು ಅಧಿಕಾರ ಹಿಡಿಯಬಹುದು ಎಂಬ ದುರುಲೋಚನೆಗೆ ಮುಂದಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಆರೋಪಿಸಿದರು.
ಹೊಳಲ್ಕೆರೆ ಪಟ್ಟಣದ ಗಣಪತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಜನಧ್ವನಿ ಯಾತ್ರೆ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಧ್ವನಿಯಿಲ್ಲದ, ರೈತ, ನಿರುದ್ಯೋಗ, ಮಹಿಳೆಯರ ವಿರೋಧಿ ನೀತಿ ಮೂಲಕ ಸಾಮಾನ್ಯ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿರುವ ಸರ್ಕಾರ, ಈಗಲೂ ಕೂಡ ಜನರ ಮನಸ್ಸಿನಲ್ಲಿ ದ್ವೇಷದ ಬೀಜ ಬಿತ್ತಿ ಅಧಿಕಾರ ಹಿಡಿಯಬಹುದು ಎಂಬ ಭ್ರಮೆಯಲ್ಲಿದೆ ಎಂದು ದೂರಿದರು.

ಸಮಸ್ಯೆಗಳ ಮಧ್ಯೆಯೂ ದೇಶಕ್ಕೆ ಅನ್ನ ನೀಡುತ್ತಿರುವ ರೈತರನ್ನೇ ಸಂಪೂರ್ಣ ನಾಶಗೊಳಿಸಲು ಕೃಷಿ ವಿರೋಧಿ ಕಾಯ್ದೆ ಜಾರಿಗೆ ತಂದು, ಕೃಷಿಕರ ಹೋರಾಟಕ್ಕೆ ಹೆದರಿ ಹಿಂದಕ್ಕೆ ಪಡೆದ ಮೋದಿ ಸರ್ಕಾರ, ರಾಜ್ಯದಲ್ಲಿ ಮಾತ್ರ ಆ ಕಾಯ್ದೆಯನ್ನು ಜಾರಿಯಲ್ಲಿಟ್ಟಿದೆ. ರೈತಸಂಘ ಸೇರಿ ವಿವಿಧ ಸಂಘಟನೆಗಳು ರಾಜ್ಯದ್ಯಂತ ನೂರಾರು ಭಾರಿ ಹೋರಾಟ ನಡೆಸಿದರು ಮನ್ನಣೆ ನೀಡುತ್ತಿಲ್ಲ. ಜವಿರೋಧಿ ಕಾಯ್ದೆ ಹಿಂಪಡೆಯುತ್ತಿಲ್ಲ ಎಂದರು.

ಸೂರಿಲ್ಲದವರು ಅರ್ಜಿ ಸಲ್ಲಿಸಿ, ಹಲವು ವರ್ಷಗಳಾಗಿದ್ದರೂ ಒಬ್ಬರಿಗೆ ಒಂದು ಮನೆ ವಿತರಿಸಿಲ್ಲ. ಕಾಂಗ್ರೆಸ್ ಜಾರಿಗೆ ತಂದಿದ್ದ ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯ ನೀಡಲು ಲಂಚ ನೀಡುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಅಧಿಕಾರ ಕಳೆದುಕೊಳ್ಳುವ ಖಚಿತತೆ ಹಿನ್ನೆಲೆಯಲ್ಲಿ ಇದ್ದಷ್ಟು ದಿನ ರಾಜ್ಯವನ್ನು ಲೂಟಿ ಮಾಡಲು ಮಂತ್ರಿಗಳು, ಬಿಜೆಪಿ ಶಾಸಕರು ಮುಂದಾಗಿದ್ದಾರೆ. ಪರಿಣಾಮ ಎಲ್ಲಿ ನೋಡಿದರೂ ಲಂಚವಾತಾರ ತಾಂಡಾವಾಡುತ್ತಿದೆ ಎಂದರು.

 

 

 

ಸಿಲಿಂಡರ್, ಅಡುಗೆ ಎಣ್ಣೆ ಗಗನಕ್ಕೆ ಏರಿದೆ. ಜನ ಕಟ್ಟಿಗೆ ಒಲೆಗೆ ಮರಳುತ್ತಿದ್ದಾರೆ. ವಿದ್ಯುತ್ ಬೆಲೆ ಏರಿಕೆಯಿಂದ ಎಷ್ಟೋ ಮನೆಗಳು ಕತ್ತಲಲ್ಲಿವೆ. ಸಾಮಾನ್ಯ ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಈ ಸಮಸ್ಯೆ ಅರಿತು ಕಾಂಗ್ರೆಸ್ ಪಕ್ಷ, ಪ್ರತಿ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಮತ್ತು ಪ್ರತಿ ಮನೆಗೆ 209 ವಿದ್ಯುತ್ ಯೂನಿಟ್ ವಿದ್ಯುತ್ ಉಚಿತ ನೀಡುವ ಘೋಷಣೆ ಮಾಡಿದೆ. ಈ ಹಿಂದೆ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳು ಈಡೇರಿಸದಂತೆ, ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲಿಗೆ ಈ ಎರಡು ಭರವಸೆ ಈಡೇರಿಸುವ ಮೂಲಕ ಜನಸಾಮಾನ್ಯರು ನೆಮ್ಮದಿ ಬದುಕು ನಡೆಸಲು ಕ್ರಮಕೈಗೊಳ್ಳುತ್ತೇವೆ.ಎಲ್ಲೆಡೆಯೂ ಕಾಂಗ್ರೆಸ್ ಪಕ್ಷದ ಪರ ಅಲೆ ಸೃಷ್ಟಿಯಾಗಿದ್ದು, ನೂರೈವತ್ತಕ್ಕೂ ಹೆಚ್ಚು ಸ್ಥಾನ ಪಕ್ಷ ಪಡೆಯಲಿದೆ ಎಂದು ಬಿಜೆಪಿ ಆಂತರಿಕ ಸಮೀಕ್ಷೆಗಳೇ ಬಹಿರಂಗಪಡಿಸಿವೆ ಎಂದು ಹೇಳಿದರು.

ಬೆಲೆ ಏರಿಕೆ, ಜನ ವಿರೋಧಿ ನೀತಿಗಳಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಬಿಜೆಪಿ ಭ್ರಷ್ಟಾಚಾರ, ಕಾಂಗ್ರೆಸ್ ಪಕ್ಷದ ಆಡಳಿತದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಲು ಪಕ್ಷದ ನೇತೃತ್ವದಲ್ಕಿ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಂಡಿದ್ದು, ಎಲ್ಲೆಡೆ ಜನಬೆಂಬಲ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಜನರ ಬಳಿ ಹೋಗುವ ನೈತಿಕತೆ ಇದ್ದು, ಭ್ರಷ್ಟ, ವಚನ ಭ್ರಷ್ಟ ಬಿಜೆಪಿಗೆ ಮತ ಕೇಳುವ ಯಾವ ಹಕ್ಕು ಇಲ್ಲ ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟಿಹಳ್ಳಿ ಶಿವಣ್ಣ ಮಾತನಾಡಿ. ಭದ್ರಾ ಮೇಲ್ದಂಡೆ ಯೋಜನೆಯಿಂದ ಕೈಬಿಟ್ಟು ಹೋಗಿದ್ದ ಹೊಳಲ್ಕೆರೆ ತಾಲ್ಲೂಕನ್ನು ಸೇರಿಸಿ, ಇಪ್ಪತ್ತೆರಡು ಕೆರೆಗಳಿಗೆ ಭದ್ರಾ ನೀರು ಹರಿಸುವ ಯೋಜನೆ ಜಾರಿಯ ರುವಾರಿ ಎಚ್.ಆಂಜನೇಯ ಅವರನ್ನು ದಾಖಲೆ ಮತಗಳ ಅಂತರದಲ್ಲಿ ಗೆಲ್ಲಿಸಲು ಎಲ್ಲ ವರ್ಗದ ಜನ ಚುನಾವಣೆಗೆ ಎದುರು ನೋಡುತ್ತಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಶೋಕ್ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿದ್ದು ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಜನ್ಮಕೊಟ್ಟ ತಾಯಿಗೆ ದ್ರೋಹ ಬಗೆದಂತೆ
ಕಳೆದ ಬಾರಿ ಎಚ್.ಆಂಜನೇಯ ಅವರನ್ನು ಸೋಲಿಸಿದ್ದರ ಕುರಿತು ಕ್ಷೇತ್ರದ ಜನರಲ್ಲಿ ಪಶ್ಚಾತಾಪ ಮೂಡಿದೆ. ಈ ಬಾರಿ ಆಂಜನೇಯ ಅವರ ಗೆಲುವು ಕ್ಷೇತ್ರದ ಜನರ ಉಳಿವಿನ ಪ್ರಶ್ನೇ ಎಂದರು.

ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ ಮಾತನಾಡಿ, ಎಚ್.ಆಂಜನೇಯ ಸಣ್ಣ ಹಳ್ಳಿಗೂ ಒಂದು ಕೋಟಿ ಇಂದ ಹತ್ತು ಕೋಟಿವರೆಗು ಅನುದಾನ ನೀಡಿ ಅಭಿವೃದ್ಧಿ ಮಾಡಿದ್ದಾರೆ. ಆದರೆ, ಮಾಡಿದ ಕೆಲಸ ಕುರಿತು ಪ್ರಚಾರ ತೆಗೆದುಕೊಳ್ಳದಿದ್ದರಿಂದ ಕಳೆದ ಬಾರಿ ಕ್ಷೇತ್ರ ಕೈತಪ್ಪಿತು. ಈ ಬಾರಿ ಜನರೇ ತೀರ್ಮಾನಿಸಿದ್ದಾರೆ. ಆಂಜನೇಯ ಅವರಷ್ಟು ಕ್ಷೇತ್ರಕ್ಕೆ ಯಾರು ಕೆಲಸ ಮಾಡಿಲ್ಲವೆಂಬ ಸತ್ಯ ಮನದಟ್ಟು ಆಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಕೆಲಸಗಳು, ಬೃಹತ್ ಕಟ್ಟಡಗಳು ಆಂಜನೇಯ ಅವರ ಕಾರ್ಯವನ್ನು ಸಾರಿ ಸಾರಿ ಹೇಳುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೊಳಲ್ಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಉಪಾಧ್ಯಕ್ಷರಾದ ಗಂಗಾಧರ್, ಮಾಜಿ ಸದಸ್ಯರಾದ ಎಸ್.ಜೆ.ರಂಗಸ್ವಾಮಿ, ಹೊಳಲ್ಕೆರೆ ಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಜರ್ ಉಲ್ಲ ಖಾನ್, ಕೆಪಿಸಿಸಿ ಸಂಯೋಕ ಜಯಣ್ಣ, ಮುಖಂಡರಾದ ಗೋಡೆಮನೆ ಹನುಮಂತಪ್ಪ, ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಧುಪಾಲೆಗೌಡ, ಹೊಳಲ್ಕೆರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಗಂಗಸಮುದ್ರ, ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ವಿನಯ್ ಗೋಡೆಮನೆ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *