ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣ

ರಾಜ್ಯ

ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣ

ಸಚಿವ ಬಿ.ಶ್ರೀರಾಮುಲು

ಚಿತ್ರದುರ್ಗ:  ಒಂದು ವರ್ಷದೊಳಗೆ ಮೊಳಕಾಲ್ಮೂರು ನೂತನ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.

ಮೊಳಕಾಲ್ಮುರು ಪಟ್ಟಣದ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ನಿರ್ಮಿಸಲಾಗುತ್ತಿರುವ ಮೊಳಕಾಲ್ಮುರು ನೂತನ  ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕು ಸ್ಥಾಪನೆ ಹಾಗೂ ಶಿಲಾನ್ಯಾಸ ನೆರವೇರಿಸಿ‌ ಅವರು ಮಾತನಾಡಿದರು.

 

 

 

ಪಟ್ಟಣದಲ್ಲಿ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಬಹಳ ದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆ ಇಂದು ನೆರವೇರಿದೆ. ಬಸ್ ನಿಲ್ದಾಣಕ್ಕೆ ಬೇಕಾದ ಸರ್ಕಾರಿ ಜಮೀನು ಪಟ್ಟದಲ್ಲಿ ಇರಲಿಲ್ಲ. ಪಟ್ಟಣದ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿ ರಿ.ಸರ್ವೆ ನಂ. 104ರಲ್ಲಿರುವ 1 ಎಕರೆ 1 ಗುಂಟೆ ಜಾಗವನ್ನು ಕಂದಾಯ ಇಲಾಖೆಯಿಂದ ರೂ.5,87,407/- ಖರೀದಿಸಿ, ರೂ.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪಟ್ಟಣಕ್ಕೆ ಹೊಂದಿಕೊಂಡತೆ ರಾಯಪುರ ಗೇಟ್ ಬಳಿ ಕಂದಾಯ ಇಲಾಖೆ 6 ಎಕರೆ ಜಮೀನು ಖರೀದಿಸಿ ರೂ.8 ಕೋಟಿ ವೆಚ್ಚದಲ್ಲಿ ಬಸ್ ಘಟಕ ನಿರ್ಮಿಸಲಾಗುತ್ತದೆ. ಇದರಿಂದ ತಾಲೂಕಿನ ಗ್ರಾಮೀಣ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಲು ಅನುಕೂಲವಾಗಲಿದೆ ಎಂದರು.

ಮೊಳಕಾಲ್ಮೂರು ನೂತನ ಬಸ್ ನಿಲ್ದಾಣದ ವೈಶಿಷ್ಟತೆಗಳು: ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಶೌಚಾಲಯ ವ್ಯವಸ್ಥೆ, ಮುಂಗಡ ಟಿಕೇಟ್ ಕಾಯ್ದಿರಿಸುವಿಕೆ, ಉಪಹಾರ ಗೃಹ, ವಿದ್ಯುತ್ ಬೆಳಕಿನ ವ್ಯವಸ್ಥೆ, ಪ್ರಯಾಣಿಕರು ಬಸ್ಸುಗಳಿಗೆ ಕಾಯುವ ಸ್ಥಳ, ವಾಣಿಜ್ಯ ಸಮುಚ್ಛಯ, ಪಾಸ್ ಕೌಂಟರ್ ಸೌಲಭ್ಯ ಇರಲಿದೆ.

ಕಾರ್ಯಕ್ರಮದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮ ಉಪಾಧ್ಯಕ್ಷ ಮೋಹನ್ ಮೆಣಸಿನಕಾಯಿ, ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರವಿಕುಮಾರ್, ರಾಜ್ಯ ರಸ್ತೆ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್,
ರಾಜ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ನಿರ್ದೇಶಕರಾದ ಪಿ.ರುದ್ರೇಶ್, ಆರುಂಡಿ ನಾಗರಾಜ್, ರಾಜು ವಿಠಲಸ ಜರತಾರಘರ,  ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್, ಮುಖಂಡರಾದ ಡಾ.ಮಂಜುನಾಥ, ರಾಮರೆಡ್ಡಿ, ಜಯಪಾಲಯ್ಯ, ಎತ್ತಿನಟ್ಟಿ ಗೌಡ್ರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *