5 ವರ್ಷವೂ ಗ್ಯಾರಂಟಿ ಯೋಜನೆಗಳ ಮುಂದುವರಿಕೆ – ಸಚಿವ ಡಿ.ಸುಧಾಕರ್

ಜಿಲ್ಲಾ ಸುದ್ದಿ

5 ವರ್ಷವೂ ಗ್ಯಾರಂಟಿ ಯೋಜನೆಗಳ ಮುಂದುವರಿಕೆ – ಸಚಿವ ಡಿ.ಸುಧಾಕರ್

 

 

 

ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ರಾಜ್ಯದ ಶೇ.76 ರಷ್ಟು ಜನರು ಸಂತೃಪ್ತ ಭಾವ ವ್ಯಕ್ತಪಡಿಸಿರುವುದು ಸಮೀಕ್ಷೆಗಳಿಂದ ತಿಳಿದು ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಈಗಾಗಲೆ ಸ್ಪಷ್ಟಪಡಿಸಿದ್ದಾರೆ. ಮುಂದಿನ 5 ವರ್ಷಗಳೂ ಕೂಡ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಹಿರಿಯೂರು ನಗರದ ನೆಹರು ಮೈದಾನ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಹಿರಿಯೂರು ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪಂಚ ಗ್ಯಾರಂಟಿಗಳ ಈಡೇರಿಸಿದ ಸಾರ್ಥಕ ಸಮಾವೇಶ” ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದೆವು, ಆಗ ವಿರೋಧ ಪಕ್ಷದವರು ಇವನ್ನೆಲ್ಲ ಜಾರಿಗೊಳಿಸಲು ಆಗಲ್ಲ, ಇವರು ಸುಳ್ಳು ಹೇಳುತ್ತಿದ್ದಾರೆ ಎಂಬುದಾಗಿ ಅಪಪ್ರಚಾರ ಮಾಡಿದರು. ಆದರೆ ಜನ ಇಂತಹ ಅಪಪ್ರಚಾರವನ್ನು ಲೆಕ್ಕಿಸದೆ ನಮ್ಮನ್ನು ಆಯ್ಕೆ ಮಾಡಿದರು. ನಮ್ಮ ಸರ್ಕಾರ ಚುನಾವಣೆಗೂ ಮುನ್ನ ಜನರಿಗೆ ನೀಡಿದ ಆಶ್ವಾಸನೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದ್ದೇವೆ. ಅಧಿಕಾರಕ್ಕೆ ಬಂದ ತಿಂಗಳ ಒಳಗಾಗಿಯೇ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ “ಗೃಹಜ್ಯೋತಿ” ಹಾಗೂ ಮಹಿಳೆಯರ ಉಚಿತ ಪ್ರಯಾಣದ “ಶಕ್ತಿ “ಯೋಜನೆಗೆ ಚಾಲನೆ ನೀಡಲಾಯಿತು. ಹಂತ ಹಂತವಾಗಿ ಮನೆ ಯಜಮಾನಿಗೆ ತಿಂಗಳಿಗೆ ರೂ.2000 ನೀಡುವ “ಗೃಹಲಕ್ಷ್ಮೀ”, 10 ಕೆ.ಜಿ. ಅಕ್ಕಿ ನೀಡುವ “ಅನ್ನಭಾಗ್ಯ ಯೋಜನೆ”, ಪದವೀಧರ, ಡಿಪೆÇ್ಲಮಾ ಉತ್ತೀರ್ಣರಾದವರಿಗೆ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನಮ್ಮದು ಕೆಲಸ ಮಾಡುವ ಹಾಗೂ ನೀಡಿದ ಭರವಸೆಯನ್ನು ಈಡೇರಿಸುವ ಸರ್ಕಾರವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಕುಟುಂಬದಲ್ಲಿ ಆರ್ಥಿಕ ಬಲ ಬಂದಿದ್ದು, ಜೀವನ ಮಟ್ಟ ಸುಧಾರಣೆ ಹಾಗೂ ನಿರ್ವಹಣೆ ಸುಲಭವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಬಡವರು, ಮಧ್ಯಮ ವರ್ಗದವರಿಗೆ ಬಹಳ ಅನುಕೂಲವಾಗಿದೆ ಎಂದರು.
ಮುಂದಿನ ವರ್ಷದ ವೇಳೆಗೆ ಹಿರಿಯೂರಿನ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ವಿ.ವಿ. ಸಾಗರ ಜಲಾಶಯದಿಂದ ಕುಡಿಯುವ ನೀರು ಹರಿಸಲಾಗುವುದು. ಈಗಾಗಲೇ ಹರ್ತಿಕೋಟೆ ಭಾಗದ 40 ಹಳ್ಳಿ, ಧರ್ಮಪುರ, ಐಮಂಗಲ ಹಾಗೂ ಜವಗೊಂಡನಳ್ಳಿ ಸೇರಿ 170 ಹಳ್ಳಿಗಳಿಗೆ ಕುಡಿಯುವ ನೀರಿನ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದರು. ಈಗಾಗಲೇ ಪೂರ್ಣಗೊಂಡಿರುವ ಐಮಂಗಲ ಹೋಬಳಿಯ 39 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ಮುಂದಿನ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕ ಅನುμÁ್ಠನ ಹಾಗೂ ಅರ್ಹ ಫಲಾನುಭವಿಗಳಿಗೆ ಅದು ತಲುಪಿದೆಯೇ ಎಂಬುದನ್ನು ಪರಿಶೀಲಿಸಲು ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರದ ಯೋಜನೆಗಳ ಕಟ್ಟಕಡೆಯ ವ್ಯಕ್ತಿಗೂ ತಲುಪುವುದು ಮುಖ್ಯ. ಅರ್ಹ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗಬಾರದು. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯೂರು ತಹಶೀಲ್ದಾರ್ ರಾಜೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ ಎಂದರು. ಜಿ.ಪಂ. ಮಾಜಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಮಾಜಿ ಸದಸ್ಯರಾದ ಗೀತಾ, ನಾಗೇಂದ್ರನಾಯ್ಕ್, ತಾ.ಪಂ. ಮಾಜಿ ಅಧ್ಯಕ್ಷೆ ಸುಜಾತಾ, ಹಿರಿಯೂರು ನಗರ ಸಭೆ ಪೌರಾಯುಕ್ತ ಮಹಾಂತೇಶ್, ನಗರ ಸಭೆ ಸದಸ್ಯರಾದ ಮಹೇಶ್, ತಿಪ್ಪೇಸ್ವಾಮಿ, ಶಿವರಂಜನಿ, ಸಮೀವುಲ್ಲಾ, ದಾದಪೀರ್, ಗಣೇಶ್, ಅಪೂರ್ವ, ಅಂಬಾಬಾಯಿ ಸೇರಿದಂತೆ ಇತರೆ ಸದಸ್ಯರು, ಹಿರಿಯೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಫಲಾನುಭವಿಗಳು ಇದ್ದರು.

Leave a Reply

Your email address will not be published. Required fields are marked *