ಕಾಂಗ್ರೆಸ್ ಪಾದಯಾತ್ರೆ ಯಾವ ರೀತಿ ಮಾಡಬೇಕು?

ರಾಜಕೀಯ

ಚಿತ್ರದುರ್ಗ: ಸ್ವಾತಂತ್ರ್ಯ ಸಂಗ್ರಾಮದ ರೀತಿಯಲ್ಲಿ ಜಿಲ್ಲೆಯಲ್ಲಿ 75 ಕಿ.ಮೀ.ಪಾದಯಾತ್ರೆ ನಡೆಸಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರು ಹಾಗೂ ಉಸ್ತುವಾರಿಗಳಾದ ಕೆ.ಎನ್.ರಾಜಣ್ಣ ಮುಖಂಡರು ಹಾಗೂ ಕಾರ್ಯಕರ್ತರುಗಳಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ 75 ಕಿ.ಮೀ.ಪಾದಯಾತ್ರೆ, ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಪಾದಯಾತ್ರೆ ಹಾಗೂ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75 ನೇ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಎ.ಐ.ಸಿ.ಸಿ. ಆದೇಶದಂತೆ ಆ.15 ರಂದು ಬೆಂಗಳೂರಿನಲ್ಲಿ ರಾಷ್ಟ್ರಧ್ವಜ ಹಿಡಿದು ಒಂದು ಲಕ್ಷ ಕಾರ್ಯಕರ್ತರು ಸೇರಿ ಪಾದಯಾತ್ರೆ ಮಾಡಲಿದ್ದೇವೆ. ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆಯಿಂದ ಮಾಡಬೇಕು. ಇದೊಂದು ಚುನಾವಣಾ ಪೂರ್ವ ತಯಾರಿ ರೀತಿಯಲ್ಲಿ ನಡೆಯಬೇಕು. ಆಗ ಮಾತ್ರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಸಾಧ್ಯ. ಅಸೂಯೆ ಪಟ್ಟುಕೊಂಡು ಪಕ್ಷ ಹಾಳು ಮಾಡಬೇಡಿ. ಕಾಂಗ್ರೆಸ್ ಪಕ್ಷದ ಗತವೈಭವ ಮರುಕಳಿಸುವ ರೀತಿಯಲ್ಲಿ ಜಿಲ್ಲೆಯಲ್ಲಿ 75 ಕಿ.ಮೀ.ಪಾದಯಾತ್ರೆಯಾಗಬೇಕು. ಅದಕ್ಕಾಗಿ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದು ಸೂಚಿಸಿದರು.
ಎಲ್ಲಾ ಜಾತಿಯವರಿಗೆ ಸಾಮಾಜಿಕ ನ್ಯಾಯ ಕೊಡುವ ಪಕ್ಷ ನಮ್ಮದು. ಅದಕ್ಕಾಗಿ ನಗರದ 35 ವಾರ್ಡ್‍ಗಳಿಗೆ ಭೇಟಿ ನೀಡಿ ನಗರಸಭೆ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರನ್ನು ಭೇಟಿ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಸ್ವಾತಂತ್ರ್ಯೋತ್ಸವ ಪಾದಯಾತ್ರೆಯಲ್ಲಿ ಬಿಜೆಪಿ.ದುರಾಡಳಿತವನ್ನು ಜನರಿಗೆ ಮನವರಿಕೆ ಮಾಡಿ ಕಾಂಗ್ರೆಸ್ ಪಕ್ಷದ ಕೊಡುಗೆ ಮತ್ತು ಸಾಧನೆಗಳನ್ನು ಪ್ರತಿ ಕ್ಷೇತ್ರ, ಗ್ರಾಮ ಪಂಚಾಯಿತಿ, ಹೋಬಳಿ, ತಾಲ್ಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ತಿಳಿಸಿ. ರಾಜ್ಯ ಸರ್ಕಾರದ ಜಿ.ಎಸ್.ಟಿ.ಪಾಲನ್ನು ಕಬಳಿಸಿ ದೇಶವನ್ನು ದಿವಾಳಿ ಮಾಡುತ್ತ ಹಿಂದುತ್ವದ ಹೆಸರೇಳಿಕೊಂಡು ಓಟು ಪಡೆಯುತ್ತಿರುವ ಪ್ರಧಾನಿ ಮೋದಿಯದು ಗೋಡ್ಸೆ ಹಿಂದುತ್ವ. ನಮ್ಮದು ಗಾಂಧಿ ಹಿಂದುತ್ವ ಎನ್ನುವುದನ್ನು ತಿಳಿಸಬೇಕಿದೆ ಎಂದು ಹೇಳಿದರು.

 

 

 

ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿ ಒಂದು ಗಂಟೆಯೊಳಗೆ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದರು. ಬಿಜೆಪಿ.ಯವರು ಸುಳ್ಳು ಹೇಳಿ ಹೇಳಿ ಸತ್ಯ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರು ಇರುವ ಸತ್ಯವನ್ನು ಧೈರ್ಯವಾಗಿ ಹೇಳಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ದಲಿತ ವಿರೋಧಿ, ಮೀಸಲಾತಿ ವಿರೋಧಿಯಾಗಿರುವ ಕೋಮುವಾದಿ ಬಿಜೆಪಿ.ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೆ ಹೊರಗುತ್ತಿಗೆ ಮೇಲೆ ನೇಮಕಾತಿ ಮಾಡಿಕೊಳ್ಳುತ್ತ ಮೀಸಲಾತಿಗೆ ಕತ್ತರಿ ಹಾಕುತ್ತಿದೆ. ಬಡವರು, ರೈತರ ಪರವಾಗಿರುವ ಕಾಂಗ್ರೆಸ್ ಪಕ್ಷ ಶಿಕ್ಷಣಕ್ಕೆ ಒತ್ತು ಕೊಟ್ಟಿದೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‍ಗೆ ಅನೇಕ ಪೂರ್ವಜರ ತ್ಯಾಗ ಬಲಿದಾನವಿದೆ ಎನ್ನುವುದನ್ನು ಹೊಸ ಪೀಳಿಗೆಗೆ ತಿಳಿಸುವ ಜವಾಬ್ದಾರಿ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳ ಮೇಲಿರುವುದರಿಂದ ಸ್ವಾತಂತ್ರ್ಯೋತ್ಸವ ಪಾದಯಾತ್ರೆಯನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು

Leave a Reply

Your email address will not be published. Required fields are marked *