Chitradurga high court shock

ಪಂಚಮಸಾಲಿ ಒಕ್ಕಲಿಗ ಮೀಸಲಾತಿ ವಿಚಾರ: ರಾಜ್ಯ ಸರ್ಕಾರಕ್ಕೆ ಹಿನ್ನೆಡೆ

ರಾಜ್ಯ

ಬೆಂಗಳೂರು: ಪಂಚಮಸಾಲಿ ಸಮದಾಯಕ್ಕೆ ಪ್ರವರ್ಗ ೨ಡಿ, ಒಕ್ಕಲಿಗರಿಗೆ ೨ಸಿ ಎಂಬ ಹೊಸ ಪ್ರವರ್ಗ ಸೃಷ್ಟಿಸಿ ವಿಶೇಷ ಮೀಸಲಾತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಹೊಸ ಮೀಸಲಾತಿ ಪ್ರಸ್ತಾವನೆಗಳಿಗೆ ರಾಜ್ಯ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ.

ಕಳೆದ ಡಿಸೆಂಬರ್‌ ೨೯ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಕ್ಕಲಿಗರಿಗೆ ೨ಸಿ, ಪಂಚಮಸಾಲಿ ಸಮುದಾಯಕ್ಕೆ ೨ಡಿ ಎಂಬ ಹೊಸ ಪ್ರವರ್ಗ ರಚಿಸಿ ಮೀಸಲಾತಿ ನೀಡುವ ನಿರ್ಧಾರ ಮಾಡಲಾಗಿತ್ತು. ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ನೀಡಿದ್ದ ಶೇಕಡಾ ೧೦ ಮೀಸಲಾತಿಯಲ್ಲಿ ಈ ವರ್ಗಗಳಿಗೆ ಪಾಲು ನೀಡಲು ನಿರ್ಧರಿಸಿತ್ತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಾಘವೇಂದ್ರ ಡಿ.ಜಿ. ಎಂಬವರು ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದರು. ಗುರುವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಪೀಠ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ. ಮುಂದಿನ ವಿಚಾರಣೆಯನ್ನು ಜ.30ಕ್ಕೆ ಮುಂದೂಡಲಾಗಿದೆ.

ಮೀಸಲಾತಿಗೆ ಹೆಚ್ಚಿದ ಬೇಡಿಕೆ
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇಕಡಾ೧೫ರಿಂದ ೧೭ಕ್ಕೆ ಹಾಗೂ ಪರಿಶಿಷ್ಟ ವರ್ಗಗಳ ಮೀಸಲಾತಿಯನ್ನು ಶೇಕಡಾ ೩ರಿಂದ ೭ಕ್ಕೆ ಏರಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು. ಬಳಿಕ ಅದನ್ನು ಅಧಿವೇಶನದಲ್ಲಿ ಅನುಮೋದಿಸಲಾಗಿದೆ.

ಈ ನಡುವೆ ಪಂಚಮಸಾಲಿ, ಒಕ್ಕಲಿಗರು ಸೇರಿದಂತೆ ನಾನಾ ಸಮುದಾಯಗಳು ತಮ್ಮ ಮೀಸಲಾತಿಯನ್ನು ೨ಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದವು. ಅದರಲ್ಲೂ ಮುಖ್ಯವಾಗಿ ಪಂಚಮಸಾಲಿ ಸಮುದಾಯ ದೊಡ್ಡ ಮಟ್ಟದಲ್ಲಿ ಹೋರಾಟವನ್ನು ಸಂಘಟಿಸಿತ್ತು. ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಮಧ್ಯಂತರ ವರದಿಯನ್ನು ಪಡೆದುಕೊಂಡಿತ್ತು. ಈ ವರದಿಯಲ್ಲಿ ೨ಎ ಪ್ರವರ್ಗದಡಿ ಮೀಸಲಾತಿ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ಆದರೆ, ಹೊಸ ಪ್ರವರ್ಗಗಳನ್ನು ಸೃಷ್ಟಿಸಿ ಮೀಸಲು ನೀಡಬಹುದು ಎಂದು ಅಭಿಪ್ರಾಯಪಟ್ಟಿತ್ತು.

ಈ ವರದಿಯನ್ನು ಆಧರಿಸಿ ರಾಜ್ಯ ಸಚಿವ ಸಂಪುಟ ಡಿಸೆಂಬರ್‌ ೨೯ರಂದು ಒಂದು ಮಹತ್ವದ ತೀರ್ಮಾನವನ್ನು ಪ್ರಕಟಿಸಿತ್ತು. ಒಕ್ಕಲಿಗರಿಗೆ ೨ಸಿ, ಪಂಚಮಸಾಲಿ ಸಮುದಾಯಕ್ಕೆ ೨ಡಿ ಎಂಬ ಹೊಸ ಪ್ರವರ್ಗ ರಚಿಸಿ ಮೀಸಲಾತಿ ನೀಡುವ ನಿರ್ಧಾರ ಮಾಡಲಾಗಿತ್ತು. ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗಕ್ಕೆ ನೀಡಿದ್ದ ಶೇಕಡಾ ೧೦ ಮೀಸಲಾತಿಯಲ್ಲಿ ಈ ವರ್ಗಗಳಿಗೆ ಪಾಲು ನೀಡಲು ನಿರ್ಧರಿಸಿತ್ತು.

 

 

 

ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಡಿಸೆಂಬರ್‌ ೨೯ರಂದು ಒಂದು ತೀರ್ಮಾನವನ್ನು ತೆಗೆದುಕೊಳ್ಳುವ ಅನಿವಾರ್ಯತೆ ಇತ್ತು. ಯಾಕೆಂದರೆ ಕೂಡಲ ಸಂಗಮ ಪೀಠದ ಮುಖ್ಯಸ್ಥರಾಗಿರುವ ಶ್ರೀ ಬಸವಜಯ ಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ಅಂದು ಅತಿ ದೊಡ್ಡ ಪ್ರತಿಭಟನೆ ಆಯೋಜನೆಗೊಂಡಿತ್ತು ಮತ್ತು ಅಂದೇ ಮೀಸಲಾತಿ ಘೋಷಿಸಬೇಕು, ಇಲ್ಲದಿದ್ದರೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಸಿದ್ಧತೆ ನಡೆದಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಂದು ೨ಸಿ ಮತ್ತು ೨ಡಿ ಪ್ರವರ್ಗ ಘೋಷಣೆಯ ಮೂಲಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು.

ಆದರೆ, ಈ ಮೀಸಲಾತಿಯ ಅಧ್ಯಯನ ನಡೆಸಿದ ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ ಸರ್ಕಾರದ ಕೊಡುಗೆಯನ್ನು ತಿರಸ್ಕರಿಸಿತ್ತು. ಸರ್ಕಾರ ೨ಎ ಪ್ರವರ್ಗದಡಿಯೇ ತಮಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಲ್ಲದೆ, ಜನವರಿ ೧೨ರ ಗಡುವನ್ನು ವಿಧಿಸಿತ್ತು. ಜನವರಿ ೧೨ರಂದೇ ಈಗ ಹೈಕೋರ್ಟ್‌ ಈ ತೀರ್ಪನ್ನು ನೀಡಿದೆ.

ಈ ತೀರ್ಪು ರಾಜ್ಯ ಸರ್ಕಾರವನ್ನು ದೊಡ್ಡ ಸಂಕಟದಿಂದ ಪಾರು ಮಾಡಿದೆ ಎಂದೇ ಹೇಳಬಹುದು. ಯಾಕೆಂದರೆ, ಹೊಸ ಮೀಸಲಾತಿಗೆ ಸಂಬಂಧಿಸಿ ಸರ್ಕಾರ ಇನ್ನೂ ಗಜೆಟ್‌ ನೋಟಿಫಿಕೇಶನ್‌ ಪ್ರಕಟಿಸಿಲ್ಲ. ಹೀಗಾಗಿ ಹೊಸ ಮೀಸಲಾತಿ ಹೇಗಿರುತ್ತದೆ ಎಂಬ ಕಲ್ಪನೆ ಇಲ್ಲ. ಒಂದೊಮ್ಮೆ ಅಧಿಸೂಚನೆ ಪ್ರಕಟಿಸಿದರೆ ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆಯೂ ಇದೆ. ಜತೆಗೆ ಮೇಲ್ವರ್ಗದ ಮೀಸಲಾತಿಯನ್ನು ಕಸಿಯುವುದರ ಬಗ್ಗೆಯೂ ವಿರೋಧ ವ್ಯಕ್ತವಾಗುವ ಅಪಾಯವಿದೆ. ಅರ್ಜಿಯ ಮುಂದಿನ ವಿಚಾರಣೆ ಜನವರಿ ೩೦ಕ್ಕೆ ನಿಗದಿಯಾಗಿರುವುದರಿಂದ ಸರ್ಕಾರ ಸ್ವಲ್ಪ ಮಟ್ಟಿಗೆ ನಿರಾಳ ಆಗಬಹುದಾಗಿದೆ.

ಹೈಕೋರ್ಟ್‌ನಲ್ಲಿ ಸರ್ಕಾರ ಹೇಳಿದ್ದೇನು?
ಪಿಐಎಲ್‌ ವಿಚಾರಣೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್‌ ಅವರು ಹೈಕೋರ್ಟ್‌ಗೆ ವಿವರಣೆ ನೀಡಿದರು. ʻʻಹಿಂದುಳಿದ ವರ್ಗಗಳ ಆಯೋಗ ಮಧ್ಯಂತರ ವರದಿ ಸಲ್ಲಿಸಿದೆ. ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿತ್ತು. ಸರ್ಕಾರ ವರದಿ ಪರಿಶೀಲಿಸಿ ಯಾವುದೇ ಕ್ರಮ ಕೈಗೊಂಡಿಲ್ಲʼʼ ಎಂದು ಎಜಿ ಮಾಹಿತಿ ನೀಡಿದರು.

 

 

Leave a Reply

Your email address will not be published. Required fields are marked *