ನಮ್ಮ ಭಾಷೆ, ಸಂಸ್ಕೃತಿಯನ್ನು ನಾವೆಂದೂ ಮರೆಯಬಾರದು

ಜಿಲ್ಲಾ ಸುದ್ದಿ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅಭಿಮತ
ನಮ್ಮ ಭಾಷೆ, ಸಂಸ್ಕøತಿಯನ್ನು ನಾವೆಂದೂ ಮರೆಯಬಾರದು

 

 

 

ಕನ್ನಡ ಕೇವಲ ಭಾಷೆ ಮಾತ್ರವಲ್ಲ, ಅದು ನಮ್ಮ ಬದುಕು ಕೂಡ ಹೌದು. ಹಾಗಾಗಿ ಕನ್ನಡವನ್ನು ನಾವು ಬದುಕಾಗಿ ಬದಲಾವಣೆ ಮಾಡಿಕೊಂಡಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು.  ನಮ್ಮ ಭಾಷೆ, ಸಂಸ್ಕøತಿಯನ್ನು ನಾವೆಂದೂ ಮರೆಯಬಾರದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.
ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸುಂದರ ಭಾಷೆ. ಕನ್ನಡ ಭಾಷೆ ನಮ್ಮ ಬದುಕು. ಭಾಷೆ ಹಾಗೂ ನಾಡಿನ ಪರಂಪರೆಯ ಶ್ರೀಮಂತಿಕೆಯನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟೆ ನಗರಿ ಚಿತ್ರದುರ್ಗ ಹಬ್ಬದ ವಾತಾವರಣದ ಸಂಭ್ರಮದಲ್ಲಿದ್ದು, ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಪುಣ್ಯ ವ್ಯಕ್ತಿಗಳು, ದೇಶಪ್ರೇಮಿಗಳು ಜನಿಸಿದ ಹೆಮ್ಮೆಯ ಕೋಟೆನಾಡು. ರಾಷ್ಟ್ರಕವಿ ಕುವೆಂಪು ಅವರಿಗೆ ಗುರುವಾಗಿ ಸಾಹಿತ್ಯ ದಿಗ್ಗಜರೆನಿಸಿಕೊಂಡ ತಳುಕಿನ ವೆಂಕಣ್ಣಯ್ಯ, ಏಕೀಕರಣದ ಪಿತಾಮಹ ಮತ್ತು ಏಕೀಕೃತ ರಾಜ್ಯದ ಮೊದಲ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾದ ದಿವಂಗತ ಎಸ್.ನಿಜಲಿಂಗಪ್ಪ ಹಾಗೂ ಪ್ರಾದೇಶಿಕ ಅಸಮಾನತೆ ಕುರಿತಂತೆ ಮತ್ತು ಅದಕ್ಕೆ ಪರಿಹಾರವಾಗಿ ಇಡೀ ದೇಶಕ್ಕೆ ಮಾದರಿಯಾಗುವಂತಹ ವರದಿ ನೀಡಿ ಸಮಾನ ಅಭಿವೃದ್ಧಿಗಾಗಿ ಸರ್ಕಾರಗಳು ಶ್ರಮಿಸಿಲು ಕಾರಣರಾದ ಪ್ರೊ.ಡಿ.ಎಂ.ನಂಜುಂಡಪ್ಪ ಅವರಂತಹ ಧೀಮಂತ ವ್ಯಕ್ತಿಗಳು ಜನಿಸಿದ ಈ  ಜಿಲ್ಲೆಯಲ್ಲಿ ಕನ್ನಡದ ಧ್ವಜ ಹಾರಿಸುವ ಪುಣ್ಯ ಕಾರ್ಯಕ್ಕೆ ಅವಕಾಶ ದೊರೆತಿರುವುದು ನನಗೆ ಹೆಮ್ಮೆಯ ಸಂಗತಿ ಎಂದರು.
ಈ ಹಿಂದೆ ಕರ್ನಾಟಕ ರಾಜ್ಯ ಭಾಷಾವಾರು ಪ್ರಾಂತ್ಯಗಳಿಂದಾಗಿ ವಿಂಗಡಣೆಯಾಗಿತ್ತು. ಹೈದರಾಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ, ಬಾಂಬೆ ಕರ್ನಾಟಕ, ಮೈಸೂರು ಕರ್ನಾಟಕ ಎಂಬ ಹಲವಾರು ಭಾಗಗಳಾಗಿರುವುದನ್ನು ಒಟ್ಟುಗೂಡಿಸಿ ಏಕೀಕರಣ ಮಾಡುವ ನಿಟ್ಟಿನಲ್ಲಿ ಹಲವಾರು ಮಹನೀಯರು ಶ್ರಮಿಸಿದ್ದಾರೆ. ಅದರಲ್ಲಿ ಪ್ರಮುಖರಾದ ಹುಯಿಲಗೋಳ ನಾರಾಯಣರಾಯರು “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಹೋರಾಟದ ಮುಖಾಂತರ ಚಳುವಳಿ ಪ್ರಾರಂಭಿಸಿದರು. ಅದೇ ರೀತಿಯಲಿ ಆಲೂರು ವೆಂಕಟರಾಯರು ಸೇರಿ ಕರ್ನಾಟಕದ ಉಗಮಕ್ಕೆ ಕಾರಣರಾದವರನ್ನು ಇಂದು ಸ್ಮರಿಸುವುದು ಅತ್ಯಗತ್ಯವಾಗಿದೆ. ಅವರ ಮಾರ್ಗದರ್ಶನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗಬಾರದು. ಕನ್ನಡ ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು. ಕನ್ನಡ ಒಂದು ಭಾಷೆ ಮಾತ್ರವಲ್ಲ. ಕನ್ನಡ ತುಂಬಾ ಸುಂದರ ಭಾಷೆ. ಕನ್ನಡ ಭಾಷೆಯನ್ನು ನಾನು ಕಲಿತ ಮೇಲೆಯೇ ಈ ಭಾಷೆಯ ಮಹತ್ವ ನನಗೆ ಅರಿವಾಯಿತು.  ಕನ್ನಡ ಪುರಾತನ ಭಾಷೆಯಾಗಿದ್ದು, ಆದಿಕವಿ ಪಂಪ, ರನ್ನ, ಜನ್ನ, ಕುಮಾರವ್ಯಾಸರು ಹುಟ್ಟಿದ ಈ ಪುಣ್ಯ ಭೂಮಿಯಲ್ಲಿ ಎಷ್ಟೋ ಚಿಂತನೆಗಳನ್ನು ಅವರು ನಮಗೆ ಬಿಟ್ಟು ಹೋಗಿದ್ದಾರೆ. ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೊಣ ಎಂದರು.
ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಎನ್ನುವ ಹಾಗೇ ಕಲಿಯುವುದಕ್ಕೆ ಎಷ್ಟೇ ಭಾಷೆಗಳಿದ್ದರೂ ನಾವು ಮಾತನಾಡಲು ಮಾತೃಭಾಷೆ ಬಳಕೆ ಮಾಡಿದಾಗ ಹೆಚ್ಚು ಸಂತಸವಾಗುತ್ತದೆ.  ಅನ್ಯಭಾಷೆಗಳು ನಾವು ಬಿಸಿಲು ಅಥವಾ ಮಳೆಯಿಂದ ರಕ್ಷಣೆಗಾಗಿ ಬಳಸುವ ಕ್ಯಾಪ್ ಅಥವಾ ಛತ್ರಿ ಇದ್ದಂತೆ, ಆದರೆ ಮಾತೃ ಭಾಷೆ ನಮ್ಮ ದೇಹಕ್ಕೆ ಅಂಟಿರುವ ಚರ್ಮದ ಹಾಗೆ, ಎಂದೆಂದೂ ದೇಹಕ್ಕೆ ರಕ್ಷಣೆ ನೀಡುವ ರೀತಿಯಲ್ಲಿರುತ್ತದೆ.  ಹೀಗಾಗಿ ನಮ್ಮ ಭಾಷೆ ಹಾಗೂ ಸಂಸ್ಕøತಿಯನ್ನು ನಾವು ಮರೆಯಬಾರದು ಎಂದರು.
ಮಾತೃಭಾಷೆ ಕಲಿಕೆಗೆ ಸಂಬಂಧಪಟ್ಟಂತೆ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ.  ಸ್ಥಳೀಯ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಎಲ್ಲ ಹಂತದಲ್ಲೂ ನೀಡುವ ಮೂಲಕ ಕಲಿಕೆ ಮತ್ತು ಕ್ರಿಯಾಶೀಲತೆಯನ್ನು ಪರಿಣಾಮಕಾರಿಯಾಗಿ ಮಕ್ಕಳು ರೂಢಿಸಿಕೊಂಡು ದಕ್ಷತೆ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಕಲಿಯುವಂತೆ ಪ್ರೇರೆಪಿಸಬೇಕಿದೆ. ವಿನೂತನ ಚಿಂತನೆಗಳನ್ನು ಮಾತೃಭಾಷೆಯಿಂದ ಮಾಡಲು ಮಾತ್ರ ಸಾಧ್ಯವಿದೆ ಎಂದರು. ಇದರ ಪ್ರಯತ್ನವಾಗಿ ಉನ್ನತ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲೂ ಕಲಿಸಲು ಪಠ್ಯಕ್ರಮ ರೂಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ: ಚಿತ್ರದುರ್ಗದ ಸಂತ ಜೋಸೆಫ್ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಕೆ.ಕೆ.ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಹಾಗೂ ಸಂಪಿಗೆ ಸಿದ್ದೇಶ್ವರ ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ ಸಂಸ್ಕøತಿ ಹಾಗೂ ಮಹತ್ವ ಸಾರುವಂತಹ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.


‘ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ’, ‘ಬಾರಿಸು ಕಂಡ ಡಿಂಡಿಮ’, ‘ಕನ್ನಡ ನಾಡಿನ ರನ್ನದ ರತುನ ಕೇಳೋ ಕಥೆಯನ್ನ’ ಚಿತ್ರಗೀತೆಗಳಿಗೆ ಅಮೋಘ ಎನಿಸುವ ರೀತಿಯಲ್ಲಿ ವಿದ್ಯಾರ್ಥಿಗಳು ಭಾವಾಭಿನಯದೊಂದಿಗೆ ನೃತ್ಯ ಪ್ರದರ್ಶಿಸಿದರು.
ಸ್ತಬ್ಧ ಚಿತ್ರ ವಿಜೇತ ತಂಡಗಳು: ರಾಜ್ಯೋತ್ಸವ ಹಿನ್ನೆಲೆಯಲ್ಲಿ ಜರುಗಿದ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಗೆ ಭಾಗವಹಿಸಿದ ಸ್ತಬ್ಧಚಿತ್ರಗಳ ಪೈಕಿ ನಾಲ್ಕು ಸ್ತಬ್ಧಚಿತ್ರಗಳಿಗೆ ಪ್ರಶಸ್ತಿ ನೀಡಲಾಯಿತು.
ಜೋಗಿಮಟ್ಟಿ ವನ್ಯಧಾಮ , ಜಿಲ್ಲೆಯ ಜೀವವೈವಿಧ್ಯತೆ, ಅರಣ್ಯ ರಕ್ಷಣೆ ಜಾಗೃತಿ, ಕನ್ನಡ ನಾಡಿನ ಪರಿಸರ, ಅಭಯಾರಣ್ಯಗಳ ಕುರಿತು ಕರ್ನಾಟಕ ರತ್ನ ದಿ.ಪುನೀತ್ ರಾಜಕುಮಾರ್ ಅಭಿನಯದ ಸಾಕ್ಷ್ಯಚಿತ್ರ ಗಂಧದ ಗುಡಿ ಚಿತ್ರದ ಸಂದೇಶ ಸಾರುವ ಅರಣ್ಯ ಇಲಾಖೆ ಸ್ತಬ್ದಚಿತ್ರ ಪ್ರಥಮ ಬಹುಮಾನಕ್ಕೆ ಆಯ್ಕೆಯಾಯಿತು.
ಕೋವಿಡ್ -19 ಸಂದರ್ಭದಲ್ಲಿ ಮಕ್ಕಳಲ್ಲಿ ಕಲಿಕೆಯಲ್ಲಿ ಉಂಟಾದ ಸ್ಥಗಿತ ನಿವಾರಣೆಗೆ, ಕಲಿಕಾ ಚೇತರಿಕೆ ವμರ್Á -2022, ನೂತನ ಶಿಕ್ಷಣ ನೀತಿ , ವಯಸ್ಕರ ಶಿಕ್ಷಣ ಕುರಿತಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ತಬ್ಧಚಿತ್ರ ಎರಡನೇ ಸ್ಥಾನ ಪಡೆಯಿತು.
ಜಿಲ್ಲೆಯ ಐತಿಹಾಸಿ ಸ್ಥಳಗಳ ಕುರಿತು ಮಾಹಿತಿಯುಳ್ಳ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಅಭಿಮಾನ ಹಾಗೂ ಸಾರಿಗೆ ಇಲಾಖೆಯ ವಿವಿಧ ಯೋಜನೆಗಳನ್ನು ಸಾರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ತಬ್ಧ ಚಿತ್ರಗಳು ಮೂರನೇ ಸ್ಥಾನವನ್ನು ಹಂಚಿಕೊಂಡವು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 14 ಮಂದಿ ಸಾಧಕರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.  ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಸ್.ದಿವಾಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ,  ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *