ಆಂಜನೇಯ ರಿಗೆ ಚಂದ್ರಪ್ಪ ಕೊಟ್ಟ ಎಚ್ಚರಿಕೆ ಏನು ಗೊತ್ತಾ?

ರಾಜಕೀಯ

ಹಗಲು-ರಾತ್ರಿ ಶ್ರಮ ಹಾಕಿ ಸಮಾಜ ಕಟ್ಟಿದ್ದೇನೆ. ಕಾಂಗ್ರೆಸ್‍ನವರು ಬೆಂಕಿ ಹಚ್ಚಲು ಬರುತ್ತಿದ್ದೀರ ಹುಷಾರ್ ಎಂದು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ.ಅಭ್ಯರ್ಥಿ ಎಂ.ಚಂದ್ರಪ್ಪ ತನ್ನ ಎದುರಾಳಿ ಹೆಚ್.ಆಂಜನೇಯನಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಚ್.ಡಿ.ಪುರ, ಕಣಿವೆಜೋಗಿಹಳ್ಳಿ ಗ್ರಾಮಗಳಲ್ಲಿ ಗುರುವಾರ ಬಿರುಸಿನ ಮತಯಾಚಿಸಿ ಮಾತನಾಡಿದರು.
ಎ.ವಿ.ಉಮಾಪತಿ ಈ ಕ್ಷೇತ್ರದಿಂದ ಚುನಾವಣೆಗೆ ನಿಂತಾಗ ಯಾರಾದರೂ ವಿರೋಧ ಮಾಡಿದ್ದರ. 2008 ರಲ್ಲಿ ನಾನು ಶಾಸಕನಾದಾಗ ಒಂದು ಮನೆ ಕೇಳುತ್ತಿದ್ದರು. ಒಂದೇ ಗಂಟೆಯಲ್ಲಿ 65 ಮನೆಗಳನ್ನು ಕೊಟ್ಟಿದ್ದೇನೆ. ಇದುವರೆವಿಗೂ ಈ ಸಮಾಜಕ್ಕೆ 3500 ಮನೆಗಳನ್ನು ವಿತರಿಸಿದ್ದೇನೆ. ತಮ್ಮದೆ ಆದ ಶಿಕ್ಷಣ ಸಂಸ್ಥೆ, ಸಮುದಾಯ ಭವನ ಕಟ್ಟಿಸಿಕೊಳ್ಳಲು ಮೂರು ಎಕರೆ ಜಾಗ ಕೊಟ್ಟಿದ್ದೇನೆ. ಯಾವ ಗ್ರಾಮಕ್ಕೆ ಹೋದರು ಅತ್ಯುತ್ತಮ ಸಿಮೆಂಟ್ ರಸ್ತೆ, ಟಾರ್ ರಸ್ತೆ ಮಾಡಿಸಿದ್ದೇನೆ. ಶಾಲೆ, ಕೆರೆಕಟ್ಟೆಗಳನ್ನು ಕಟ್ಟಿಸಿದ್ದೇನೆ. ದಿನಕ್ಕೆ ಐದಾರು ಗಂಟೆ ವಿದ್ಯುತ್ ನೀಡಿ ರೈತರ ತೋಟಗಳನ್ನು ಉಳಿಸಿದ್ದೇನೆ. ಐದು ವರ್ಷ ಮಂತ್ರಿಯಾಗಿದ್ದಲ್ಲ ಎಂದಾದರೂ ಗೊಲ್ಲರಹಟ್ಟಿ, ವಡ್ಡರಹಟ್ಟಿಯನ್ನು ನೋಡಿದ್ದ ಎಂದು ಹೆಚ್.ಆಂಜನೇಯನನ್ನು ತಡೆದು ನಿಲ್ಲಿಸಿ ಕೇಳಿ ಎಂದು ಕ್ಷೇತ್ರದ ಮತದಾರರನ್ನು ಎಚ್ಚರಿಸಿದರು.
ಕಣಿವೆಜೋಗಿಹಳ್ಳಿ ಎಲ್ಲಿದೆ ಅಂತ ನೋಡಿದ್ದ ಆಂಜನೇಯ ಎಂದು ಏರುಧ್ವನಿಯಲ್ಲಿ ಗುಡುಗಿದ ಎಂ.ಚಂದ್ರಪ್ಪ ಕೊರೋನಾದಲ್ಲಿ ಪ್ರತಿಯೊಬ್ಬರಿಗೂ ಮನೆ ಬಾಗಿಲಿಗೆ ಉಚಿತ ಅಕ್ಕಿ ಗೋಧಿ ನೀಡಿದ ದೇಶದ ಪ್ರಧಾನಿ ಮೋದಿರವರು ಎಲ್ಲರಿಗೂ ಉಚಿತ ಲಸಿಕೆ ಕೊಡಿಸಿದ್ದರ ಫಲವಾಗಿ ದೇಶ ಸುರಕ್ಷಿತವಾಗಿದೆ. ಮೋಸದ ಮಾತಿಗೆ ಬಲಿಯಾಗಬೇಡಿ. ನಿಮ್ಮ ಹೊಲ ಮನೆ ಕೆಲಸ ಮಾಡುವವರಿಗೆ ಯಾವ ರೀತಿ ನೀವು ಕೂಲಿ ಕೊಡುತ್ತೀರೋ ಅದೇ ರೀತಿ ಕ್ಷೇತ್ರದ ಅಭಿವೃದ್ದಿಗಾಗಿ ನಾನು ಮಾಡಿರುವ ಕೆಲಸ ನೋಡಿ ಈ ಬಾರಿಯ ಚುನಾವಣೆಯಲ್ಲಿ ಮತ ಕೊಡಿ ಎಂದು ಜನತೆಯಲ್ಲಿ ಮನವಿ ಮಾಡಿದರು.
ದೇವಾಂಗ ಸಮಾಜವನ್ನು ಕೈಬಿಟ್ಟಿಲ್ಲ. ಸಮುದಾಯ ಭವನ ಕಟ್ಟಿಸಿಕೊಳ್ಳಲು ಹತ್ತು ಲಕ್ಷ ರೂ.ಕೇಳಿದರು. ನಾನು ಒಂದು ಕೋಟಿ ರೂ.ಗಳನ್ನು ಕೊಟ್ಟಿದ್ದೇನೆ. ಇಲ್ಲಿಯೂ ಸಮುದಾಯ ಭವನ ನಿರ್ಮಿಸಿಕೊಳ್ಳಲು ಇಪ್ಪತ್ತು ಲಕ್ಷ ರೂ.ಗಳನ್ನು ನೀಡಿದ್ದೇನೆ. ಇನ್ನು ಕೊಡುತ್ತೇನೆ. ಒಂದೂ ಓಟೂ ಕೂಡ ಬೇರೆ ಪಕ್ಷಕ್ಕೆ ಹೋಗಬಾರದು. ಕಳೆದ ಚುನಾವಣೆಯಲ್ಲಿ ನಲವತ್ತು ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಈ ಬಾರಿ ಅರವತ್ತರಿಂದ ಎಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆಂಬ ವಿಶ್ವಾಸ ವ್ಯಕ್ತಪಡಿಸಿದ ಅಭ್ಯರ್ಥಿ ಎಂ.ಚಂದ್ರಪ್ಪ ಕ್ಷೇತ್ರಾದ್ಯಂತ ಮತದಾರರ ಹೃದಯ ಗೆದ್ದಿದ್ದೇನೆಂದು ಹೇಳಿದರು.
ಐದು ವರ್ಷಗಳ ಕಾಲ ಶಾಸಕನಾಗಿ ಕ್ಷೇತ್ರದಲ್ಲಿ ಏನೇನು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆಂದು ನನಗಿಂತ ನಿಮಗೆ ಚೆನ್ನಾಗಿ ಗೊತ್ತು. ಹೆಚ್.ಡಿ.ಪುರ ಸೇರಿ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಿದ್ದೇನೆ. ಕ್ಷೇತ್ರಾದ್ಯಂತ ಪ್ರತಿ ಹಳ್ಳಿ ಹಳ್ಳಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ 510 ಕೋಟಿ ರೂ.ಗಳನ್ನು ಖರ್ಚು ಮಾಡಿ ಹಿರಿಯೂರಿನ ವಾಣಿವಿಲಾಸಸಾಗರದಿಂದ ನೇರವಾಗಿ ನೀರು ತರಲು ಪೈಪ್‍ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಂದನಹೊಸೂರು, ಹೆಚ್.ಡಿ.ಪುರ, ಶಿವಗಂಗ, ನೆಲ್ಲಿಕಟ್ಟೆ ಕೆರೆಗಳು ಒಣಗಿ ನೀರು ಕಾಣದೆ ಇದ್ದ ಸಂದರ್ಭದಲ್ಲಿ ರೈತರು ತೋಟಗಳನ್ನು ಉಳಿಸಿಕೊಳ್ಳಲು ಎಲ್ಲಾ ಕೆರೆಕಟ್ಟೆಗಳಿಗೆ ಪೈಪ್‍ಲೈನ್ ಹಾಕಿಸಿ ನೀರು ಕೊಡುವ ಕೆಲಸ ಮಾಡಿದ್ದೇನೆ. ಒಂದು ಗಂಟೆಗಳ ಕಾಲ ಕರೆಂಟ್ ಇದ್ದರೆ ಹತ್ತು ಹದಿನೈದು ಸಲ ಟ್ರಿಪ್ ಆಗುತ್ತಿತ್ತು. ಈಗ ಐದರಿಂದ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಕೊಡುತ್ತಿದ್ದೇನೆ. 13 ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. 493 ಹಳ್ಳಿಗಳಲ್ಲಿ ಎಲ್ಲಾ ರೀತಿಯ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಅದಕ್ಕಾಗಿ ಬಿಜೆಪಿ.ಗೆ ಮತ ಹಾಕಿ ಋಣ ತೀರಿಸುವ ಪ್ರಮಾಣ ಮಾಡಬೇಕು ಎಂದು ಮತದಾರರಲ್ಲಿ ಎಂ.ಚಂದ್ರಪ್ಪ ವಿನಂತಿಸಿದರು.
ದೇವಾಂಗ ಸಮಾಜದ ಮುಖಂಡರಾದ ಪ್ರಭಾಕರ್, ಚಿತ್ರಹಳ್ಳಿ ದೇವರಾಜ್, ಆರ್.ಎ.ಅಶೋಕ್, ಪುರಸಭೆ ಸದಸ್ಯರಾದ ಬಸಯ್ಯ, ಮಂಜಣ್ಣ, ಸಿದ್ದರಾಮಣ್ಣ, ರಂಗಸ್ವಾಮಿ, ರಾಜಪ್ಪ, ಜಯಪ್ಪ, ಪ್ರವೀಣ್, ನಾಗರಾಜ್ ಹಾಗೂ ಬಿಜೆಪಿ. ಕಾರ್ಯಕರ್ತರು, ಗ್ರಾಮದ ಹಿರಿಯರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು

 

 

 

Leave a Reply

Your email address will not be published. Required fields are marked *