ನವದೆಹಲಿ :- ಭಾರತೀಯ ಮುಖ್ಯ ನ್ಯಾಯಮೂರ್ತಿ ಅವರನ್ನ ಟೀಕಿಸಿ ನ್ಯಾಯಾಂಗ ನಿಧನೆ ಆರೋಪ ಎದುರಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ 1 ರೂಪಾಯಿ ದಂಡ ವಿಧಿಸಿ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆರನ್ನ ಟೀಕಿಸಿ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು. ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಪ್ರಶಾಂತ್ ಭೂಷಣ್ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗಿತ್ತು. ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ನ್ಯಾಯಪೀಠ ವಿಚಾರಣೆ ನಡೆಸಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನ ದೋಷಿ ಎಂದು ತೀರ್ಪು ನೀಡಿತ್ತು. ತಮ್ಮ ಹೇಳಿಕೆಗೆ ಬೇಷರತ್ ಕ್ಷಮೆ ಕೇಳುವಂತೆ ಸುಪ್ರೀಂ ಕೋರ್ಟ್ ಕಾಲವಕಾಶ ನೀಡಿತ್ತು. ಆದ್ರೆ ನಾನು ಯಾವುದೇ ಕಾರಣಕ್ಕೂ ತಮ್ಮ ಆತ್ಮಸಾಕ್ಷಿಗೆ ವಂಚನೆ ಮಾಡಿ ಕ್ಷಮೆ ಕೇಳಲ್ಲ, ಏನು ಶಿಕ್ಷೆ ನೀಡಿದರು ನಾನು ಸ್ವೀಕರಿಸುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದರು.
ಇನ್ನು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, ಪ್ರಶಾಂತ್ ಭೂಷಣ್ ಅವರನ್ನ ಕ್ಷಮಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಪ್ರಶಾಂತ್ ಭೂಷಣ್ ಅವರಿಗೆ ಎಚ್ಚರಿಕೆ ಕೊಟ್ಟು ಕ್ಷಮಿಸುವುದು ಉತ್ತಮ ಎಂದು ಸಲಹೆ ನೀಡಿದ್ದರು. ಆದರೆ, ಇದಕ್ಕೆ ಒಪ್ಪದ ನ್ಯಾಯಪೀಠ, ಪ್ರಶಾಂತ್ ಭೂಷಣ್ ತಮ್ಮ ತಪ್ಪನ್ನೇ ಒಪ್ಪಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಇಂದು ಅವರ ತೀರ್ಪು ಕಾಯ್ದಿರಿಸಿದ ನ್ಯಾಯಪೀಠ, ಅಂತಿಮವಾಗಿ 1 ರೂಪಾಯಿ ದಂಡ ವಿಧಿಸಿ ಬಿಟ್ಟು ಕಳುಹಿಸಲು ಕೋರ್ಟ್ ನಿರ್ಧಾರ ಮಾಡಿದೆ.