ಕುತೂಹಲ ಕೆರಳಿಸಿದ ಮಠಾಧೀಶರೊಂದಿಗೆ ಆಂಜನೇಯ ಚರ್ಚೆ

ರಾಜಕೀಯ

ಕುತೂಹಲ ಕೆರಳಿಸಿದ ಮಠಾಧೀಶರೊಂದಿಗೆ ಆಂಜನೇಯ ಚರ್ಚೆ
ಟಿಕೆಟ್ ಘೋಷಣೆಗೆ ಮುನ್ನವೇ ಮತ ಪ್ರಚಾರದ ಅಖಾಡಕ್ಕೆ ಇಳಿದಿದ್ದ ಮಾಜಿ ಸಚಿವ ಎಚ್.ಆಂಜನೇಯ, ಬುಧವಾರ ದಿಢೀರನೆ ಮಠಾಧೀಶರು, ಭೀಮಸಮುದ್ರದ ಕೆಲ ಮುಖಂಡರ ನಿವಾಸಕ್ಕೆ ಭೇಟಿ ನೀಡಿ ಕೆಲಕಾಲ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಹೊಳಲ್ಕೆರೆ ಪಟ್ಟಣದಲ್ಲಿ ಗುರುವಾರ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿರುವ ಆಂಜನೇಯ, ಬುಧವಾರ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ, ಶ್ರೀ ಬಸವ ಮಡಿವಾಳ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭ ಮಾತನಾಡಿದ ಮಠಾಧೀಶರು, ಆಂಜನೇಯ ಸರ್ವ ಸಮುದಾಯದ ನಾಯಕ.‌ ಸಮಾಜಕಲ್ಯಾಣ ಸಚಿವರಾಗಿದ್ದ ಸಂದರ್ಭ ಜಾತ್ಯತೀತವಾಗಿ ಎಲ್ಲ ಮಠಗಳಿಗೂ ಕೇಳದಿದ್ದರು ಅನುದಾನ ನೀಡಿದ್ದಾರೆ. ಸ್ವಾಮೀಜಿಗಳ ಕುರಿತು ಹೆಚ್ಚು ಗೌರವ ಹೊಂದಿರುವ ಆಂಜನೇಯ ಅವರು, ನಾಮಪತ್ರ ಸಲ್ಲಿಕೆಗೂ ಮುನ್ನ ದಿನ ನಮ್ಮಗಳ ಆಶೀರ್ವಾದ ಪಡೆದಿರುವುದು ಅವರಲ್ಲಿ ಮಠಗಳ ಕುರಿತು ಇರುವ ಪ್ರೀತಿ, ಭಕ್ತಿಗೆ ಸಾಕ್ಷಿ ಎಂದರು.
ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭ ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಹೊಳಲ್ಕೆರೆಯಲ್ಲಿ ತಲೆ ಎತ್ತಿರುವ ಶಿಕ್ಷಣ, ತರಬೇತಿ ಕೇಂದ್ರಗಳು, ಸಮುದಾಯ ಭವನ, ಪತ್ರಕರ್ತರು, ವಕೀಲರ ಭವನ ಹೀಗೆ ಅನೇಕ ಕಟ್ಟಡಗಳು ಸಾಕ್ಷಿಯಾಗಿ ನಿಂತಿವೆ. ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಜನಸೇವೆ ಮಾಡುವ ಅವಕಾಶ, ಶಕ್ತಿ ಬಸವಾದಿ ಶರಣರು ದಯಪಾಲಿಸಲಿ ಎಂದು ಮಠಾಧೀಶರು ಹೇಳಿ ಶುಭ ಹಾರೈಸಿದರು.
ಈ ಸಂದರ್ಭ ತಮ್ಮ ಕೊಠಡಿಯಲ್ಲಿ ಆಂಜನೇಯ ಅವರ ಜೊತೆ ಕೆಲಕಾಲ ವೈಯಕ್ತಿವಾಗಿ ಮಾತುಕತೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿತು.
ಮಾಜಿ ಶಾಸಕ ಎ.ವಿ.ಉಮಾಪತಿ, ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಅಸಂಘಟಿತ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ಸೇರಿದಂತೆ ವಿವಿಧ ಸಮುದಾಯದ ಹಾಗೂ ಪಕ್ಷದ ಅನೇಕ ಮುಖಂಡರು ಇದ್ದರು.
ಬಳಿಕ ಭೀಮಸಮುದ್ರಕ್ಕೆ ತೆರಳಿದ ಆಂಜನೇಯ, ಎ.ವಿ.ಉಮಾಪತಿ, ಅಜಾತಶತ್ರು ಬಿ.ಟಿ.ಚನ್ನಬಸಪ್ಪ ನಿವಾಸಕ್ಕೆ ಭೇಟಿ ಬಿ.ಟಿ.ಪುಟ್ಟಪ್ಪ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ಜಿ.ಎಸ್.ಮಂಜುನಾಥ್ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಆಂಜನೇಯ, ನನಗೆ ರಾಜಕೀಯ ಶಕ್ತಿ ನೀಡಿದ್ದ ಬಿ.ಟಿ.ಚನ್ನಬಸಪ್ಪ ಹಾಗೂ ರಾಜಕೀಯ ಕ್ಷೇತ್ರದ ದೊಡ್ಡ ಶಕ್ತಿ ಆಗಿದ್ದ ಶಿವಪ್ಪ ಅವರು  ನಮ್ಮೊಂದಿಗೆ ಈಗ ಇಲ್ಲ. ಆದರೆ, ಅವರು ನಡೆದುಬಂದ ಹಾದಿ ನಮಗೆ ಮಾದರಿ ಆಗಿದೆ. ಆದ್ದರಿಂದ ನಾಮಪತ್ರ ಸಲ್ಲಿಕೆ ಮುನ್ನ ದಿನ ಅವರುಗಳ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರ ಜೊತೆ ಚರ್ಚಿಸುವುದು ನಾನು ನಡೆಸಿಕೊಂಡು ಬಂದ ಸಾಂಪ್ರಾದಾಯ ಎಂದರು.
ಭೀಮಸಮುದ್ರ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರು, ಈ ಊರು ರಾಜಕೀಯ ಶಕ್ತಿ ಕೇಂದ್ರವಾಗಿ ರಾಜ್ಯದ ಗಮನವನ್ನೇ ಸೆಳೆದಿದೆ. ಕಾಂಗ್ರೆಸ್ ಪಕ್ಷದ ಕಟ್ಟಾಳು, ಮುಖಂಡ ಜಿ.ಎಸ್.ಮಂಜುನಾಥ್, ದಿವಂಗತ ಬಿ.ಟಿ.ಚನ್ನಬಸಪ್ಪ ಸಹೊದರ ಬಿ.ಟಿ.ಪುಟ್ಟಪ್ಪ ಇವರುಗಳ ಕುಟುಂಬ ಬಹುದೊಡ್ಡ ರಾಜಕೀಯ ಹಿನ್ನೆಲೆ ಹೊಂದಿದೆ. ಅವರೊಂದಿಗಿನ ನನ್ನ ಸಂಬಂಧ ನಾಲ್ಕು ದಶಕದ್ದಾಗಿದೆ. ಆದ್ದರಿಂದ ಭೇಟಿ ನೀಡಿದ್ದೆನೆ ಎಂದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಮಾಜಿ ಸಚಿವ ಆಂಜನೇಯ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷದ ಕಾರ್ಯಕರ್ತರು, ಮುಖಂಡರ ಒತ್ತಡಕ್ಕೆ ಸ್ಪಂದಿಸಿ ಕಣಕ್ಕೆ ಇಳಿದಿದ್ದಾರೆ. ಅವರು ಮತ್ತು ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಹೇಳಿದರು.
ಆದ್ದರಿಂದ ವಿವಿಧ ಸಮುದಾಯದ ಮುಖಂಡರು, ಅನೇಕ ತಂಡಗಳನ್ನಾಗಿ ಮಾಡಿಕೊಂಡು ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ. ಆಂಜನೇಯ ಅವರ ಗೆಲುವು ಖಚಿತವಾಗಿದ್ದು ಅಹಂಕಾರಿಗಳಿಗೆ ತಕ್ಕ ಪಾಠವನ್ನು ಮತದಾರರು ಕಲಿಸಲಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಂ.ಎಲ್.ತಿಪ್ಪೇಸ್ವಾಮಿ,  ಹೊಳಲ್ಕೆರೆ ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ತಾಪಂ ಮಾಜಿ ಉಪಾಧ್ಯಕ್ಷ ಓಂಕಾರಸ್ವಾಮಿ ಮೊದಲಾದವರಿದ್ದರು.

 

 

 

Leave a Reply

Your email address will not be published. Required fields are marked *