ರಸ್ತೆಬದಿ ನಿಂತಿದ್ದ ಕಾರಿನಲ್ಲಿತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ದಾಳಿಕೋರರಿಂದ ಬಚಾವ್​ ಆಗಿದ್ದೇ ರೋಚಕ!

ಕ್ರೈಂ

ಬೆಂಗಳೂರು: ಜನರೇ ಎಚ್ಚರ! ಮನೆಯಿಂದ ಚಿನ್ನಾಭರಣ ಹೊರ ತರುವ ಮುನ್ನ ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದಾರೆಯೇ? ಎಂಬುದರ ಬಗ್ಗೆ ಗಮನ ಇರಲಿ. ಇಲ್ಲೊಬ್ಬ ಉದ್ಯಮಿ ಕಾರಿನಲ್ಲಿ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇಟ್ಟುಕೊಂಡು ರಸ್ತೆಬದಿ ವಾಹನ ನಿಲ್ಲಿಸಿಕೊಂಡು ನಿಂತದ್ದೇ ತಡ ದುಷ್ಕರ್ಮಿಗಳು ರಾಜಾರೋಷವಾಗಿ ದಾಳಿ ಮಾಡಿದ್ದಾರೆ. ಕಾರಿನ ಗಾಜು ಒಡೆದು, ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಭರಣ ದರೋಡೆಗೆ ಯತ್ನಿಸಿದ್ದಾರೆ.

ವಿದ್ಯಾರಣ್ಯಪುರದ ಚಾಮುಂಡೇಶ್ವರಿ ಲೇಔಟ್​ ನಿವಾಸಿ ಉದ್ಯಮಿ ಶ್ರೀಕಾಂತ್​ ಹಲ್ಲೆಗೊಳಗಾದವರು. ಮಲ್ಲೇಶ್ವರದ 18ನೇ ಕ್ರಾಸ್​ನಲ್ಲಿ ಸ್ನೇಹಿತನ ಪಾಲುದಾರಿಕೆಯಲ್ಲಿ ಸ್ಟಾರ್​ ಗೋಲ್ಡ್​ ಕಂಪನಿ ಹೆಸರಿನ ಚಿನ್ನಾಭರಣ ಮಾರಾಟ ಮತ್ತು ಖರೀದಿಯ ಕಂಪನಿ ಹೊಂದಿರುವ ಶ್ರೀಕಾಂತ್​, ಆ.26ರಂದು ರಾತ್ರಿ 10 ಗಂಟೆಯಲ್ಲಿ ವ್ಯವಹಾರ ಮುಗಿಸಿಕೊಂಡು ಚಿನ್ನಾಭರಣದೊಂದಿಗೆ ಮನೆಗೆ ಹೊರಟಿದ್ದರು. ಸ್ಯಾಂಕಿ ಟ್ಯಾಂಕಿ ರಸ್ತೆಬದಿ ಕಾರು ನಿಲ್ಲಿಸಿ, ಒಳಗಡೆ ಕುಳಿತ್ತಿದ್ದರು.ಇದೇ ವೇಳೆ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಶ್ರೀಕಾಂತ್​ ಅವರ ಕಾರಿನ ಗಾಜು ಒಡೆದು 20 ಲಕ್ಷ ರೂ. ಮೌಲ್ಯದ 600 ಗ್ರಾಂ ಚಿನ್ನಾಭರಣವಿದ್ದ ಬ್ಯಾಗ್​ ಕಸಿಯಲು ಯತ್ನಿಸಿದರು.

 

 

 

ಕಾರಿನಲ್ಲೇ ಕುಳಿತ್ತಿದ್ದ ಶ್ರೀಕಾಂತ್​, ತಡೆಯಲು ಮುಂದಾದಾಗ ಅವರ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆಗಾಗಲೇ ಇನ್ನಿಬ್ಬರು ಆರೋಪಿಗಳು ಸ್ಥಳಕ್ಕೆ ಬಂದಿದ್ದರು. ಇದರಿಂದ ಗಾಬರಿಗೊಂಡ ಶ್ರೀಕಾಂತ್​ ರಕ್ಷಣೆಗಾಗಿ ಕೂಗಿಕೊಂಡರು. ಸ್ಥಳೀಯರು ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಬಳಿಕ “ನಮ್ಮ 100”ಗೆ ಶ್ರೀಕಾಂತ್​ ದೂರು ಮುಟ್ಟಿಸಿದರು. ನಿಯಂತ್ರಣ ಕೊಠಡಿಯ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಹೊಯ್ಸಳ ಸಿಬ್ಬಂದಿ, ಗಾಯಗೊಂಡಿದ್ದ ಉದ್ಯಮಿ ಶ್ರೀಕಾಂತ್​ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಆರೋಪಿಗಳ ಮುಖಚಹರೆ ಆಧರಿಸಿ ತೀವ್ರ ಶೋಧ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *