ರೈತ ಕುಲಕ್ಕೆ ಮಾದರಿಯಾದ ವಿಕಲಚೇತನ ಬಾಲಣ್ಣ

ಜಿಲ್ಲಾ ಸುದ್ದಿ

 

ಚಿತ್ರದುರ್ಗ :ಕೃಷಿ ಚಟುವಟಿಕೆಯಿಂದ ಯುವ ಸಮೂಹ ವಿಮುಖವಾಗುತ್ತಿರುವ ಸಮಯದಲ್ಲಿ ಅಂಗವಿಕರೊಬ್ಬರು ತನ್ನ ಅಂಗವೈಕಲ್ಯ ಮೀರಿ ಕೃಷಿ ಚಟುವಟಿಕೆ ನಡೆಸುತ್ತಿರುವುದು ಅಚ್ಚರಿ ಎನ್ನಿಸಿದರು ಸತ್ಯ.ಅಂಗವಿಕಲ ವ್ಯಕ್ತಿ‌ ಇತರರಿಗೆ ಮಾದರಿಯಾಗಿದ್ದಾರೆ.

Chitradurga role model of balanna

 

 

 

 

ಪ್ರತಿ ನಿತ್ಯ ಟ್ರೈಸಿಕಲ್ ತುಳಿದುಕೊಂಡು ಹೊಲಕ್ಕೆ ಬರುವ ಬಾಲಣ್ಣ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿ ಗ್ರಾಮದವರು. 40 ವರ್ಷದ ಅಂಗವೈಕಲ್ಯದ ಬಾಲಣ್ಣನಂತಹ ಅಪರೂಪದ ರೈತ ಕೃಷಿ ಕಾಯಕದಲ್ಲಿ ತೊಡಗಿದ್ದಾರೆ.
ಹತ್ತು ವರ್ಷದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ಅಕ್ಕಿ ಗಿರಣಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುವಾಗ ಭತ್ತದ ಮೂಟೆ ಬಿದ್ದು ಸೊಂಟ ಹಾಗೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದು, ಮನೆಗೆ ಆಸರೆಯಾಗಿದ್ದ ವ್ಯಕ್ತಿ ಮೂಲೆ ಹಿಡಿಯುವಂತಾಗಿತ್ತು.ಅಕ್ಕಿ ಗಿರಣಿಯವರು ಬಾಲಣ್ಣನಿಗೆ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರವು ಐದು ವರ್ಷ ಪೋಷಕರು, ಸೋದರರ, ನಿರ್ಲಕ್ಷಕ್ಕೆ ಒಳಗಾಗಿ ಮನೆಯಲ್ಲಿಯೇ ಇದ್ದರು. ಯಾರು ಆಸರೆಯಾಗಿ ನಿಲ್ಲದ ಕಾರಣ ಜೀವನದಲ್ಲಿ ಸಾಧನೆ ಮಾಡಿ ತನ್ನ ಜೀವನ ಸಾಗಿಸುವ ಹಿನ್ನೆಲೆಯಲ್ಲಿ ಹಿಂದೆ ಇದ್ದ ಗುಡಿಸಲು ಮನೆಯಲ್ಲಿ ವಾಸಿಸಿಕೊಂಡು ಸಾಧನೆಯತ್ತ ಮುಖ ಮಾಡಿದ್ದಾರೆ.ಕೋರ್ಟ್ ನಿಂದ ಬಂದ ಒಂದಿಷ್ಟು ಪರಿಹಾರದ ಹಣದಿಂದ ಪಿತ್ರಾರ್ಜಿತವಾಗಿ ಬಂದಿದ್ದ ಎರಡು ಎಕರೆ ಜಮೀನಿನಲ್ಲಿ ಒಂದು ಬೋರ್ ವೆಲ್ ಕೊರೆಸಿ ಕೊಂಡು, ಭೂಮಿಯನ್ನು ಅಚ್ಚುಕಟ್ಟು ಮಾಡಿ ಕೃಷಿ ಚಟುವಟಿಕೆಗೆ ಮುಂದಾದರು. ಇದೇ ರೀತಿ ಕಳೆದ ಹತ್ತು ವರ್ಷದಿಂದ ಪತ್ನಿಯ ನೆರವಿನೊಂದಿಗೆ ಜಮೀನಿನಲ್ಲಿ ರಾಗಿ, ಸೌತೆಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿ ಬೆಳೆಯುತಿದ್ದಾರೆ. ಯಾರಿಗೂ ಅವಲಂಬಿತವಾಗಿರದೆ ತಾನೆ ಹೊಲದಲ್ಲಿ ನೀರು ಕಟ್ಟುವುದು, ಕಳೆ ಕಿಳುವುದು, ಸೌತೆಕಾಯಿ ಬಿಡಿಸುವುದು ಇತರೇ ಕೆಲಸಗಳನ್ನು ಮಾಡುವುದರ ಜೊತೆಗೆ ಕಡಿಮೆಯೆಂದರೂ ವರ್ಷಕ್ಕೆ 1 ರಿಂದ 1.50 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಅಂಗವೈಕಲ್ಯದ ಪಿಂಚಣಿ ಬಿಟ್ಟರೆ ಸರ್ಕಾರದಿಂದ ಈ ಬಡಪಾಯಿಗೆ ಯಾವುದೇ ಸೌಲಭ್ಯ ದೊರೆತಿಲ್ಲ. ಕನಿಷ್ಠ ಒಂದು ಮನೆ ಹಾಗೂ ತ್ರಿಚಕ್ರ ವಾಹನ, ಮಗನಿಗೆ ಉಚಿತ ಶಿಕ್ಷಣ ದೊರೆತರೆ ಸಾಕು ಎಂದು ಬಾಲಣ್ಣ ಹೇಳುತ್ತಾರೆ. ಪ್ರಸ್ತುತ ಇರುವ ಟ್ರೈಸಿಕಲ್ ಬೇರೊಬ್ಬ ಅಂಗವಿಕಲಿನಿಂದ 2500 ರೂಪಾಯಿ ಕೊಟ್ಟು ಖರೀದಿಸಿದ್ದು. ಹಳೆಯದಾದ ಕಾರಣ ಅದು ಪದೇ ಪದೇ ರೀಪೇರಿಗೆ ಬರುತ್ತಿದ್ದು, ಜವಗೊಂಡನಹಳ್ಳಿಗೆ ಒಯ್ದು ರಿಪೇರಿ ಮಾಡಿಸಿಕೊಳ್ಳುವುದು ತುಂಬಾ ಕಸ್ಟ.

ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಮನೆ ಮತ್ತು ತ್ರಿಚಕ್ರ ವಾಹನ ಸೌಲಭ್ಯ ಮಾಡಿಕೊಟ್ಟರೆ ಕೃಷಿಯಲ್ಲಿ ಮತ್ತಷ್ಟು ಸಾಧನೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿ ಹಾಗೂ ತನ್ನ ಬದುಕನ್ನು ತಾನು ನಿರ್ವಹಿಸುತ್ತಾರೆ ಇಂತಹ ಬಾಲಣ್ಣನಿಗೆ ಸಹಾಯದ ಹಸ್ತದ ಅವಶ್ಯಕತೆ ಇದೆ.ಅಂಗವೈಕಲ್ಯವಿದ್ದರು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬಾಲಣ್ಣ ಇತರೇ ರೈತರಿಗೆ ಮಾದರಿಯಾಗಿದ್ದಾರೆ. ಇಂತಹ ಅಂಗವೈಕಲ್ಯ ರೈತನಿಗೆ ಸರ್ಕಾರದಿಂದ ಹಾಗೂ ಕೃಷಿ ಇಲಾಖೆಯಿಂದ ಸೌಲಭ್ಯಗಳು ಸಿಗುವುದರ ಜೊತೆಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಇಂತಹವರನ್ನು ವಿಶೇಷ ರೈತ ಎಂದು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *